ಬೆಂಗಳೂರು: ಕಾಂಗ್ರೆಸ್ ಕೊನೆಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಹೆಸರನ್ನು ಅಂತಿಮಗೊಳಿಸಿದೆ. ಕಳೆದ ಕೆಲ ತಿಂಗಳಿಂದ ಸಾಕಷ್ಟು ಚರ್ಚೆಗೀಡಾಗಿದ್ದ ಯುವ ಕಾಂಗ್ರೆಸ್ ಅಧ್ಯಕ್ಷರ ಹುದ್ದೆ ಈಗ ರಕ್ಷಾ ರಾಮಯ್ಯರ ಪಾಲಾಗಿದೆ. ಪಕ್ಷದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧಿಕೃತ ಜಾಲತಾಣದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರು ರಕ್ಷಾ ರಾಮಯ್ಯ ಎಂದು ನಮೂದಿಸಲಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿವಾದಕ್ಕೆ ದೊಡ್ಡ ತಿರುವು ಸಿಕ್ಕು ಕಳೆದ ಕೆಲ ತಿಂಗಳಿಂದ ದೊಡ್ಡಮಟ್ಟದ ವಿವಾದ ಏರ್ಪಟ್ಟಿತ್ತು. ಅತೀ ಹೆಚ್ಚು ಮತ ಪಡೆದು ಚುನಾವಣೆಯಲ್ಲಿ ಗೆದ್ದಿದ್ದ ಮೊಹಮ್ಮದ್ ನಲಪಾಡ್ ಆಯ್ಕೆ ಅನರ್ಹಗೊಳಿಸಿದ ರಾಷ್ಟ್ರೀಯ ಕಾಂಗ್ರೆಸ್ 2ನೇ ಅತೀ ಹೆಚ್ಚು ಮತ ಪಡೆದ ರಕ್ಷಾ ರಾಮಯ್ಯನ ಅಧ್ಯಕ್ಷರೆಂದು ಘೋಷಿಸಿತ್ತು.
ತಾವೇ ಅಧಿಕೃತ ಅಧ್ಯಕ್ಷರಾಗಿ ನಿಯೋಜನೆಯಾಗುತ್ತೇವೆ ಎಂದು ಹೇಳಿಕೊಂಡಿದ್ದ ಮೊಹಮ್ಮದ್ ನಲಪಾಡ್ ಸಾಕಷ್ಟು ಪ್ರಯತ್ನವನ್ನು ನಡೆಸಿದ್ದರು. ಪಕ್ಷದ ರಾಷ್ಟ್ರೀಯ ಮುಖಂಡರನ್ನು ಭೇಟಿಯಾಗಿ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದರು. ಆದರೆ, ಕೊನೆಗೂ ಪಕ್ಷ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು.