ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಮಹತ್ವದ ಕಡತವೊಂದು ಕಣ್ಮರೆಯಾಗಿದೆ ಎಂಬ ಆರೋಪ ಆಧಾರರಹಿತ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಡತ ಸಂಖ್ಯೆ ಯುಡಿಡಿ/439/ಎಂಎನ್ ಯು/2018 (ಪಾರ್ಟ್ 2)ರಲ್ಲಿ ಬಿಬಿಎಂಪಿ ಜಾಹೀರಾತು ನೀತಿ ಬಗ್ಗೆ ಹೆಚ್ಚುವರಿ ಸ್ಪಷ್ಟೀಕರಣ ಕೋರಿ ಸಿಎಂ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆ ಸಂಬಂಧ ಹೆಚ್ಚುವರಿ ಸ್ಪಷ್ಟೀಕರಣ ಪಡೆಯಲಾಗಿದೆ. ಈ ಕಡತ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ್ದಲ್ಲ. ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿತ ಎಲ್ಲಾ ಕಡತಗಳು ಸಿಎಂ ಕಚೇರಿಯಲ್ಲಾಗಲಿ, ಸಚಿವರುಗಳ ಕಚೇರಿಯಲ್ಲಾಗಲಿ ನಾಪತ್ತೆಯಾಗಿಲ್ಲ. ನಗರಾಭಿವೃದ್ಧಿ ಇಲಾಖೆ ಬಳಿ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಕಡತ ನಾಪತ್ತೆ ಆರೋಪ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಾಲಯದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಂಬಂಧಿಸಿದ ಮಹತ್ವದ ಕಡತ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರಿಗೆ ನ.22ರಂದು ಪತ್ರ ಬರೆದಿದ್ದು, ಇದು ಅನುಮಾನ ಹುಟ್ಟಲು ಕಾರಣವಾಗಿತ್ತು.