ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿಯ ಮೂವರು ರಾಜ್ಯಸಭೆಗೆ ಆಯ್ಕೆಯಾದರೆ, ಕಾಂಗ್ರೆಸ್‌ನಿಂದ ಒಬ್ಬರು ಸಂಸತ್ತಿನ ಮೇಲ್ಮನೆಗೆ ಚುನಾಯಿತರಾಗಿದ್ದಾರೆ.
ಬಿಜೆಪಿಯಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಟ ಹಾಗು ರಾಜಕಾರಣಿ ಜಗ್ಗೇಶ್ ಹಾಗು ಲೆಹರ್ ಸಿಂಗ್ ಸಿರೋಯಾ ಅವರಿಗೆ ಅನಾಯಾಸದ ಗೆಲುವು ದಕ್ಕಿದೆ. ಇನ್ನೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್‌ಗೆ ಚುನಾವಣೆಯಲ್ಲಿ ಗೆಲುವಾಗಿದೆ. ಇದೇ ವೇಳೆ ಕಾಂಗ್ರೆಸ್ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಸೋಲುಂಡಿದ್ದಾರೆ.
ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ ಹಾಗು ಹರಿಯಣ ರಾಜ್ಯಗಳ 16 ರಾಜ್ಯಸಭೆ ಸ್ಥಾನಗಳನ್ನು ತಂಬಲು ಜೂನ್ 10ರಂದು ಮತದಾನ ನಡೆದಿತ್ತು. ಸದ್ಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆ 245 ಸದಸ್ಯರನ್ನು ಹೊಂದಿದ್ದು, ಈ ಪೈಕಿ 233 ಚುನಾಯಿತ ಹಾಗು 12 ನಾಮನಿರ್ದೇಶಿತ ಸದಸ್ಯರಿದ್ದಾರೆ.
ಪ್ರಧಾನಿ ಮೋದಿ ದೂರವಾಣಿ ಕರೆ:ಕರ್ನಾಟಕದಿಂದ ಎರಡನೇ ಬಾರಿಗೆ ಆಯ್ಕೆಯಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮೊದಲ ಬಾರಿ ಆಯ್ಕೆಯಾದ ನಟ ಜಗ್ಗೇಶ್ ಮತ್ತು ಮೂರನೇ ಅಭ್ಯರ್ಥಿಯಾಗಿ ಗೆದ್ದ ಲೆಹರ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.
ಅಲ್ಲದೇ, ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆಯ ಮೂಲಕ ಮೂವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಧಾನಿ ದೂರವಾಣಿ ಮೂಲಕ ಶುಭಾಶಯ ಕೋರಿ ಶ್ಲಾಘಿಸಿದರು. ಮೂವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ತಾವು ಪಟ್ಟ ಪ್ರಯತ್ನ ಅಮೂಲ್ಯವಾದದ್ದು. ಕರ್ನಾಟಕ ರಾಜ್ಯದ ಈ ಕೊಡುಗೆ ಸರಣಿಯ ಇನ್ನಷ್ಟು ಅತ್ಯುತ್ತಮವಾಗಿ ಕೆಲಸ ಮಾಡುವಂತೆ ಪ್ರಧಾನಿ ಮೋದಿಯವರು ಬೊಮ್ಮಾಯಿಗೆ ತಿಳಿಸಿದರು.
ನನಗೆ ಎರಡನೇ ಅವಕಾಶ ಸಿಕ್ಕಿದೆ: ನನ್ನನ್ನು ಬೆಂಬಲಿಸಿದ್ದಕ್ಕಾಗಿ ಬಿ.ಎಸ್.ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೇ, ನನಗೆ ಎರಡನೇ ಬಾರಿ ಸೇವೆ ಮಾಡುವ ಅವಕಾಶ ಕಲ್ಪಿಸಿದ ಪ್ರತಿಯೊಬ್ಬ ಶಾಸಕರು ಮತ್ತು ಕರ್ನಾಟಕ ಜನತೆಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದು ಇಡೀ ತಂಡದ ಗೆಲುವು: ಇದು ನನ್ನ ಗೆಲುವಲ್ಲ. ಇದು ಇಡೀ ಕಾಂಗ್ರೆಸ್ ತಂಡದ ಗೆಲುವು. ಆದ್ದರಿಂದ ನಾನು ಸಂರ್ಪೂಣ ಕಾಗ್ರೆಸ್ ಪಕ್ಷ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯ ವಿಪ್ಗಳು, ಎಲ್ಲ ಶಾಸಕರು ಹಾಗೂ ನನಗೆ ಮತ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಅದರಲ್ಲೂ, ಒಂದೇ ಒಂದೂ ಅಸಿಂಧು ಮತ ಚಲಾವಣೆಯಾಗಿಲ್ಲ. ಇದು ನಿಜಕ್ಕೂ ಕಾಂಗ್ರೆಸ್ ತಂಡದ ಗೆಲುವು ಎಂದು ಕಾಂಗ್ರೆಸ್ನ ಜೈರಾಂ ರಮೇಶ್ ತಿಳಿಸಿದ್ದಾರೆ.
ಜೆಡಿಎಸ್ ಬಿಜೆಪಿಯ 'ಬಿ' ಟೀಂ:ಅಲ್ಲದೇ, ನಮ್ಮ ಎರಡನೇ ಅಭ್ಯರ್ಥಿಯ ಮನ್ಸೂರ್ ಅಲಿ ಖಾನ್ ಅವರ ಹೋರಾಟದ ಮನೋಭಾವ ಮೆಚ್ಚುವಂಥದ್ದು. ಅವರು ಜೆಡಿಎಸ್ ಮತ್ತು ಬಿಜೆಪಿ ನಡುವಿನ ನಂಟನ್ನು ಬಹಿರಂಗಪಡಿಸಿದ್ದಾರೆ. ಜೆಡಿಎಸ್ ಬಿಜೆಪಿಯ 'ಬಿ' ಟೀಂ ಆಗಿರುವುದನ್ನೂ ಮನ್ಸೂರ್ ಇಂದು ಸಾಬೀತು ಮಾಡಿದ್ದಾರೆ ಎಂದೂ ಜೈರಾಂ ರಮೇಶ್ ಹೇಳಿದ್ದಾರೆ.
ಇದನ್ನೂ ಓದಿ:ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಪ್ರತಿಭಟನೆ: ರಾಜ್ಯಾದ್ಯಂತ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ