ಬೆಂಗಳೂರು:ಆಪ್ತನನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದಾರೆ. ಬಿಎಸ್ವೈ ಲೆಕ್ಕಾಚಾರ, ಮಾಧುಸ್ವಾಮಿ ತಂತ್ರಗಾರಿಕೆ ಫಲ ನೀಡಿದ್ದು, ಹೈಕಮಾಂಡ್‌ಗೆ ಬೋನಸ್ ರೂಪದಲ್ಲಿ ಒಂದು ಹೆಚ್ಚುವರಿ ರಾಜ್ಯಸಭೆ ಸ್ಥಾನವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಂಬಿ ಬಂದವರನ್ನು ಯಡಿಯೂರಪ್ಪ ಎಂದಿಗೂ ಕೈಬಿಡುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ಆಪ್ತ ಲೆಹರ್ ಸಿಂಗ್ ಅವರನ್ನು ಎರಡು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದ ಯಡಿಯೂರಪ್ಪ ಈಗ ರಾಜ್ಯಸಭೆಗೆ ಕಳುಹಿಸಿ ಕೊಡುತ್ತಿದ್ದಾರೆ. ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿ ಹೈಕಮಾಂಡ್ ಇಬ್ಬರ ಹೆಸರನ್ನು ಪ್ರಕಟಿಸಿತ್ತು. ಆದರೆ, ಹೆಚ್ಚುವರಿ ಮತಗಳನ್ನು ಬಳಸಿಕೊಂಡು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತೇವೆ ಎನ್ನುವ ವಾಗ್ದಾನವನ್ನು ರಾಜ್ಯ ಬಿಜೆಪಿ ಮಾಡಿತ್ತು. ಅದರಂತೆ ಮೂರನೇ ಅಭ್ಯರ್ಥಿ ಕಣಕ್ಕಿಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ ಅಂದು ಕೊಂಡಂತೆ ತಮ್ಮ ಆಪ್ತನನ್ನು ದೆಹಲಿ ವಿಮಾನ ಹತ್ತಿಸಿದ್ದಾರೆ.
ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಯಡಿಯೂರಪ್ಪ ಮತ್ತು ಹೈಕಮಾಂಡ್ ನಾಯಕರ ದೆಹಲಿ ಕೊಂಡಿಯಾಗಿ ಕೆಲಸ ಮಾಡಿದ್ದ ಲೆಹರ್ ಸಿಂಗ್ ಅವರಿಗೆ ಪರಿಷತ್ ಸ್ಥಾನ ನೀಡಿದ್ದ ಯಡಿಯೂರಪ್ಪ ಎರಡನೇ ಬಾರಿಯೂ ಅವಕಾಶ ಕಲ್ಪಿಸಿದ್ದರು. 12 ವರ್ಷ ಪರಿಷತ್ ಸದಸ್ಯರಾಗಿದ್ದ ಲೆಹರ್ ಸಿಂಗ್ ಅವರನ್ನು ಅವರ ಅಪೇಕ್ಷೆಯಂತೆ ಯಡಿಯೂರಪ್ಪ ದೆಹಲಿಗೆ ಕಳುಹಿಸಿಕೊಡುತ್ತಿದ್ದಾರೆ. ಆ ಮೂಲಕ ಆಪ್ತರನ್ನು ಕೈಬಿಡುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ.
ಓದಿ:ರಾಜ್ಯಸಭೆ ಫಲಿತಾಂಶ: ಬಿಜೆಪಿಗೆ ಸಿಂಹಪಾಲು, ಕಾಂಗ್ರೆಸ್ಗೆ ಮತ್ತೆ ನಿರಾಶೆ
122 ಸದಸ್ಯ ಬಲದ ಬಿಜೆಪಿ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ಗೆ ತಲಾ 45 ಮತಗಳನ್ನು ಹಾಕಬೇಕು. ಉಳಿದ 32 ಹೆಚ್ಚುವರಿ ಮತಗಳನ್ನು ಲೆಹರ್ ಸಿಂಗ್ ಅವರಿಗೆ ಹಾಕಬೇಕು. ಮೊದಲೆರಡು ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿದವರು ಲೆಹರ್ ಸಿಂಗ್ ಅವರಿಗೆ ಎರಡನೇ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಆದರೆ, ಹೈಕಮಾಂಡ್ ನಿರ್ಮಲಾ ಸೀತಾರಾಮನ್ ಅವರಿಗೆ ಒಂದು ಹೆಚ್ಚುವರಿ ಮತ ಹಂಚಿಕೆ ಮಾಡುವಂತೆ ಸೂಚಿಸಿತ್ತು. ಅದರಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ 46, ಜಗ್ಗೇಶ್ಗೆ 45 ಮತ್ತು ಲೆಹರ್ ಸಿಂಗ್ ಗೆ 31 ಮತಗಳ ಹಂಚಿಕೆ ಮಾಡಿ ಮೊದಲೆರಡು ಅಭ್ಯರ್ಥಿಗಳ ಪರ ಮತ ಚಲಾಯಿಸುವ ಶಾಸಕರು ಎರಡನೇ ಪ್ರಾಶಸ್ತ್ಯದ ಮತವನ್ನು ಲೆಹರ್ ಸಿಂಗ್ ಪರ ಚಲಾಯಿಸುವಂತೆ ಶಾಸಕಾಂಗ ಸಭೆಯಲ್ಲಿ ಸೂಚಿಸಿ ವಿಪ್ ಜಾರಿಗೊಳಿಸಲಾಯಿತು.