ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಬೆಂಬಲ ಪಡೆಯುವ ಪ್ರಯತ್ನವನ್ನು ಜೆಡಿಎಸ್ ಮುಂದುವರಿಸಿದೆ. ರಾಜ್ಯಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾದ ಬಳಿಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬೆಂಬಲವನ್ನು ಕೋರಿದ್ದರು. ಅಷ್ಟರಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ.
ಈಗ ಮತ್ತೊಮ್ಮೆ ದೇವೇಗೌಡರು ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಮೂಲಕ ಕೋಮುವಾದಿ ಶಕ್ತಿಯನ್ನು ದೂರ ಇಡಬೇಕು ಹಾಗೂ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇಬ್ಬರು ನಾಯಕರ ಮಾತುಕತೆ ಫಲಪ್ರದವಾಗಿ, ಸೋನಿಯಾ ಗಾಂಧಿ ಅವರು ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದರೆ, ಕೊನೇ ಗಳಿಗೆಯಲ್ಲಿ ಚುನಾವಣಾ ಕಣದ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ಹಾಗಾಗಿ, ಜೆಡಿಎಸ್ ನಾಯಕರು ಮಾತ್ರ ಮರಳಿ ಯತ್ನ ಮಾಡುತ್ತಿದ್ದಾರೆ. ಚುನಾವಣೆ ನಡೆಯುವುದು ಅನಿವಾರ್ಯ ಆಗಿರುವುದರಿಂದ ಎಷ್ಟರಮಟ್ಟಿಗೆ ಇದು ಜೆಡಿಎಸ್‍ಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಜೆಡಿಎಸ್ ಮಾಡಿದ ಪ್ರಯತ್ನ ವಿಫಲ: ಚುನಾವಣಾ ಕಣದಲ್ಲಿ ಕಾಂಗ್ರೆಸ್‍ನ ಇಬ್ಬರು, ಬಿಜೆಪಿಯ ಮೂವರು ಹಾಗೂ ಜೆಡಿಎಸ್‍ನ ಒಬ್ಬರು ಅಭ್ಯರ್ಥಿ ಇದ್ದಾರೆ. ಕಾಂಗ್ರೆಸ್‍ನ 2ನೇ ಅಭ್ಯರ್ಥಿಯಾಗಿರುವ ಮನ್ಸೂರ್ ಆಲಿಖಾನ್ ಅವರ ನಾಮಪತ್ರ ವಾಪಸ್ ಪಡೆಯುವಂತೆ ಮಾಡಲು ಜೆಡಿಎಸ್ ಮಾಡಿದ ಪ್ರಯತ್ನ ವಿಫಲವಾಯಿತು. ಜೆಡಿಎಸ್‍ನ ಬೆಂಬಲದ ಕೋರಿಕೆಗೆ ರಾಜ್ಯ ಕಾಂಗ್ರೆಸ್‍ನ ಯಾವ ನಾಯಕರು ಸ್ಪಂದಿಸಲಿಲ್ಲ. ಬದಲಾಗಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರಿದ್ದರು. ಹೀಗಾಗಿ ನಾಮಪತ್ರ ವಾಪಸ್ ಪಡೆಯುವ ಕಡೆಯ ದಿನದೊಳಗೆ ನಡೆದಿರುವ ಎಲ್ಲ ಪ್ರಯತ್ನಗಳು ಮುರಿದು ಬಿದ್ದವು. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲವಿಲ್ಲದೆ ಗೆಲ್ಲಲು ಸಾಧ್ಯವಿಲ್ಲ.
ಇದನ್ನೂ ಓದಿ:ಬಿಜೆಪಿಯವರು ದಲಿತ ಸಿಎಂ ಮಾಡಲಿ : ಮಾಜಿ ಸಿಎಂ ಹೆಚ್‌ಡಿಕೆ ಸವಾಲು
ವಿಧಾನಸಭೆಯಲ್ಲಿ 32 ಜೆಡಿಎಸ್ ಶಾಸಕರಿದ್ದರೂ ವರಿಷ್ಠರ ಬಗ್ಗೆ ಅಸಮಾಧಾನ ಇರುವ ಕೆಲವು ಜೆಡಿಎಸ್ ಶಾಸಕರು ಈ ಚುನಾವಣೆಯಲ್ಲಿ ಕೈ ಕೊಡುವ ಆತಂಕವಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು, ಕಾಂಗ್ರೆಸ್‍ನ ಒಬ್ಬ ಅಭ್ಯರ್ಥಿ ಗೆಲುವಿಗೆ ಯಾವುದೇ ಅಡ್ಡಿ ಇಲ್ಲ. ಆದರೆ ಬಿಜೆಪಿಯ 3ನೇ ಹಾಗೂ ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ಮಾತ್ರ ಸ್ಪರ್ಧೆ ಏರ್ಪಟ್ಟಿದೆ.
ಕಾಂಗ್ರೆಸ್-ಜೆಡಿಎಸ್ ನಡುವೆ ಪೈಪೋಟಿ: ಬಿಜೆಪಿ ಹಾಗೂ ಜೆಡಿಎಸ್ ಸಮಾನ ಮತಗಳನ್ನು ಪಡೆಯುವ ಸಾಧ್ಯತೆಗಳಿವೆ. ಆದರೆ ಕಾಂಗ್ರೆಸ್‍ಗೆ ಈ ಎರಡೂ ಪಕ್ಷಗಳಿಗಿಂತಲೂ ಕಡಿಮೆ ಮತಗಳು ದೊರೆಯಲಿದ್ದು, ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಜೆಡಿಎಸ್ ವ್ಯಕ್ತಪಡಿಸುತ್ತಿದೆ. ಹಾಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪೈಪೋಟಿಯಿಂದಾಗಿ ಬಿಜೆಪಿಯ 3ನೇ ಅಭ್ಯರ್ಥಿ ಗೆಲುವಿನ ಹಾದಿ ಸುಲಭವಾದಂತಾಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದು ಜೆಡಿಎಸ್ ಅಭ್ಯರ್ಥಿ ಸೋತರೆ ಪರೋಕ್ಷವಾಗಿ ಕಾಂಗ್ರೆಸ್, ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎಂಬ ಆರೋಪವನ್ನು ಹೊರಿಸಲು ಜೆಡಿಎಸ್ ಸಜ್ಜಾಗಿದೆ.
ಕೋಮುವಾದಿ ಪಕ್ಷ ದೂರವಿಡುವ ಉದ್ದೇಶ: ಜಾತ್ಯತೀತ ಶಕ್ತಿಗಳು ಒಂದಾಗಿ ಕೋಮುವಾದಿ ಪಕ್ಷವನ್ನು ದೂರವಿಡುವ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೊನೆ ಕ್ಷಣದ ಪ್ರಯತ್ನವನ್ನು ದೆಹಲಿ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದಿದ್ದು, ಚುನಾವಣಾ ಕಣದಲ್ಲಿ 6 ಅಭ್ಯರ್ಥಿಗಳು ಉಳಿದಿದ್ದಾರೆ. ಜೂನ್ 10 ರಂದು ಮತದಾನ ನಡೆಯಲಿದೆ.
ಕ್ರಾಸ್ ವೋಟಿಂಗ್ ಆತಂಕ:ವಿಧಾನಸಭೆಯಲ್ಲಿ ಜೆಡಿಎಸ್ ಪಕ್ಷದ 32 ಸದಸ್ಯರಿದ್ದರೂ ವರಿಷ್ಠರ ಬಗ್ಗೆ ಅಸಮಾಧಾನ ಇರುವ ಜೆಡಿಎಸ್‌ನ ಕೆಲ ಶಾಸಕರು ಈ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲಿಸುವ, ಇಲ್ಲವೆ ಮತದಾನಕ್ಕೆ ಗೈರು ಹಾಜರಾಗುವ ಆತಂಕ ಕೂಡ ನಾಯಕರಲ್ಲಿ ಉಂಟಾಗಿದೆ. 2016 ರಲ್ಲಿ ಅಡ್ಡಮತದಾನದ ಕಹಿ ಅನುಭವ ಜೆಡಿಎಸ್ ಆಗಿದೆ. ಹೀಗಾಗಿ ಈ ಬಾರಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.