ಬೆಂಗಳೂರು :ರಾಜ್ಯಸಭೆ ಚುನಾವಣೆ ಹಿನ್ನೆಲೆ ರಾಜ್ಯ ಬಿಜೆಪಿ ಮಹತ್ವದ ಸಭೆ ನಡೆಸಿದೆ. ಯಾವ ಶಾಸಕ ಯಾವ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮತಗಳ ಹಂಚಿಕೆ ಮಾಡಲಾಗಿದೆ. ದ್ವಿತೀಯ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ.
ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ : ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಸಭೆ ಚುನಾವಣೆ ಗೆಲುವಿನ ಲೆಕ್ಕಾಚಾರ ನಡೆಸಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ತಮ್ಮ ಮೂವರು ಅಭ್ಯರ್ಥಿಗಳಿಗೆ ಮತಗಳ ವಿಂಗಡಣೆ ಮಾಡಿದರು.
ಉಸ್ತುವಾರಿ ಅರುಣ್ ಸಿಂಗ್ ಮತ್ತು ವೀಕ್ಷಕ ಕಿಶನ್ ರೆಡ್ಡಿ ಜೊತೆ ಸಮಾಲೋಚನೆ ನಡೆಸಿ ಪ್ರತಿಯೊಬ್ಬ ಅಭ್ಯರ್ಥಿಗೂ ಮತಗಳ ವಿಂಗಡಣೆ ಮಾಡಲಾಗಿದ್ದು, ಯಾವ ಅಭ್ಯರ್ಥಿಗೆ ಯಾವ ಶಾಸಕರು ಮತದಾನ ಮಾಡಬೇಕೆಂದು ನಿಗದಿ ಮಾಡಲಾಯಿತು.
ಮತ ವಿಂಗಡಣೆ :ಮೊದಲ ಮತ್ತು ಎರಡನೇ ಅಭ್ಯರ್ಥಿಗೆ ತಲಾ 45 ಮತ ನಿಗದಿಪಡಿಸಿದ್ದು, ಮೂರನೇ ಅಭ್ಯರ್ಥಿಗೆ ಬಿಜೆಪಿ ಬಳಿ ಹೆಚ್ಚುವರಿಯಾಗಿ ಉಳಿದ 32 ಮತ ನಿಗದಿಪಡಿಸಲಾಯಿತು. ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ಗೆ 45 ಶಾಸಕರು ಮತದಾನ ಮಾಡಲಿದ್ದು, ಎರಡನೇ ಅಭ್ಯರ್ಥಿ ಜಗ್ಗೇಶ್ಗೆ 45 ಶಾಸಕರು ಮತದಾನ ಮಾಡಲಿದ್ದಾರೆ.
3ನೇ ಅಭ್ಯರ್ಥಿ ಲೇಹರ್ ಸಿಂಗ್ಗೆ 32 ಶಾಸಕರು ಮತ್ತು ಮೊದಲೆರಡು ಅಭ್ಯರ್ಥಿಗೆ ಮತ ಹಾಕಿದ್ದ ಎಲ್ಲ ಶಾಸಕರು ಎರಡನೇ ಪ್ರಾಶಸ್ತ್ಯದ ಮತದಾನಕ್ಕೆ ಸೂಚಿಸಲಾಯಿತು. ಯಾರ್ಯಾರಿಗೆ ಯಾವ ಶಾಸಕರು ಮತ ಹಾಕಬೇಕೆಂದು ಮತ ವಿಂಗಡಣೆ ಮಾಡಿದ್ದು, ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತರುವುದಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ಯಾಂಟೂ, ಚಡ್ಡಿ ಸುಡೋದನ್ನೆಲ್ಲ ಬಿಟ್ಡು ಬಿಡಿ, ಆರ್ಎಸ್ಎಸ್ ತಂಟೆಗೆ ಬಂದ್ರೆ ಸುಟ್ಟು ಹೋಗ್ತಿರಿ : ಆರ್ ಅಶೋಕ್
ಹೈಕಮಾಂಡ್ ನಿರ್ಧಾರದ ಮೇಲೆ ಮತಗಳ ಹಂಚಿಕೆ ಅಂತಿಮಗೊಳ್ಳಲಿದ್ದು, ಮೊದಲನೇ ಮತ್ತು 2ನೇ ಅಭ್ಯರ್ಥಿಗೆ ತಲಾ 45 ಮತ ಸಾಕೆಂದು ಹೈಕಮಾಂಡ್ ತೀರ್ಮಾನ ಮಾಡಿದೆ. 45 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಮೊದಲ ಮತ್ತು 2ನೇ ಅಭ್ಯರ್ಥಿಗೆ ಸಿಗಲಿದೆ.
ಆದರೆ, ತಾಂತ್ರಿಕ ಸಮಸ್ಯೆಗಳಾಗದಂತೆ ಎಚ್ಚರಿಕೆವಹಿಸಿ ಒಂದು ಹೆಚ್ಚುವರಿ ಮತವನ್ನು ಮೊದಲನೇ ಮತ್ತು 2ನೇ ಅಭ್ಯರ್ಥಿಗೆ ಹಾಕಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಒಬ್ಬ ಅಭ್ಯರ್ಥಿಗೆ ತಲಾ 46 ಮತ ಹಾಕಲಿದ್ದಾರೆ. ಆಗ ಮೂರನೇ ಅಭ್ಯರ್ಥಿಗೆ 30 ಮತ ದೊರೆಯಲಿದೆ. ಹಾಗಾಗಿ, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಮೂರನೇ ಅಭ್ಯರ್ಥಿ ಗೆಲ್ಲಿಸುವ ಬಗ್ಗೆ ಚರ್ಚೆ :ಎರಡನೇ ಪ್ರಾಶಸ್ತ್ಯದ ಮತದ ಮೂಲಕ 3ನೇ ಅಭ್ಯರ್ಥಿಯನ್ನ ಹೇಗೆ ಗೆಲ್ಲಿಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕಿದ್ದು, ಬೇರೆ ಪಕ್ಷದ ಶಾಸಕರ ಮತಸೆಳೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಬೇರೆ ಪಕ್ಷದ ಒಂದೆರಡು ಮೊದಲ ಪ್ರಾಶಸ್ತ್ಯದ ಮತ ಬಿಜೆಪಿಯ 3ನೇ ಅಭ್ಯರ್ಥಿಗೆ ಹಾಕಿದರೂ, ಗೆಲುವು ಸುಲಭ ಎಂದು ಲೆಕ್ಕಾಚಾರ ಹಾಕಲಾಗಿದೆ. ಈ ಬಗ್ಗೆ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.