ಬೆಂಗಳೂರು:ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ಬಗ್ಗೆ ವಿಶೇಷ ಅರ್ಥ ಬೇಡ. ನಾನೊಬ್ಬ ಸ್ನೇಹಿತನಾಗಿ ಅವರನ್ನು ಅಭಿನಂದಿಸಲು ಬಂದಿದ್ದೇನಷ್ಟೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹಾಗು ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಕುಮಾರಪಾರ್ಕ್ ನಲ್ಲಿರುವ ಕುಮಾರಕೃಪಾ ಅತಿಥಿಗೃಹಕ್ಕೆ ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಭೇಟಿ ನೀಡಿದರು. ಡಿಸಿಎಂ ಡಿ ಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿ ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಗ್ಗೇಶ್, ಡಿ ಕೆ ಶಿವಕುಮಾರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮೊದಲನೇಯದಾಗಿ ಸ್ನೇಹಿತನಾಗಿ ಡಿಸಿಎಂ ಡಿಕೆ ಶಿವಕುಮಾರ್ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನಷ್ಟೆ. ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ನಾನು ಅಮೇರಿಕಾದಲ್ಲಿದ್ದೆ. ಹಾಗಾಗಿ ಈಗ ವಾಪಸ್ ಬಂದ ನಂತರ ಇಂದು ಬಂದು ಅಭಿನಂದನೆ ಸಲ್ಲಿದ್ದೇನಷ್ಟೆ. ಇದನ್ನು ಬಿಟ್ಟು ಇಂದಿನ ಭೇಟಿಯಲ್ಲಿ ಬೇರೆ ಏನೂ ಇಲ್ಲ. ಯಾವುದೇ ರೀತಿಯ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಿಂದ ರಾಜ್ಯಸಭಾ ಸದಸ್ಯನಾಗಿ ಇಂದಿಗೆ ಒಂದು ವರ್ಷ ಪೂರೈಸಿದ್ದೇನೆ. ನನ್ನ ಕಾರ್ಯ ವ್ಯಾಪ್ತಿಯಲ್ಲಿ ನನಗೆ ಇನ್ನೂ ಏನೆಲ್ಲಾ ಮಾಡೋಕೆ ಸಾಧ್ಯವೋ ಅದೆಲ್ಲನ್ನೂ ನಾನು ಮಾಡುತ್ತೇನೆ. ಸದ್ಯ ತುಮಕೂರನ್ನು ನೋಡಲ್ ಜಿಲ್ಲೆಯಾಗಿ ನನಗೆ ನೀಡಲಾಗಿದೆ. ಅದರಲ್ಲಿ ಒಂದು ಗ್ರಾಮ, ಒಂದು ಹೋಬಳಿ ತೆಗೆದುಕೊಳ್ಳಬೇಕು, ಆ ಕೆಲಸ ಮಾಡುತ್ತೇನೆ. ಇದುವರೆಗೂ 16ರಿಂದ 17 ಕೋಟಿ ರೂಪಾಯಿ ವೆಚ್ಚದ ಕೆಲಸ ಮಾಡಿದ್ದೇನೆ. ಇನ್ನೂ ಮುಂದೆ ಸಾಕಷ್ಟು ಕೆಲಸ ಮಾಡುವುದಿದೆ. ನನ್ನ ವ್ಯಾಪ್ತಿಯ ಅಷ್ಟೂ ಅನುದಾನದ ಬಳಕೆ ಮಾಡುತ್ತೇನೆ ಎಂದು ಜಗ್ಗೇಶ್ ವಿಶ್ವಾಸ ವ್ಯಕ್ತಪಡಿಸಿದರು.