ಬೆಂಗಳೂರು:ರಾಜ್ಯಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಜೂ.10ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಕಾಂಗ್ರೆಸ್ನ ಜಯರಾಂ ರಮೇಶ್ ಅವರಿಗೆ ಸುಲಭ ಗೆಲುವು ಸುಲಭ ಆಗಿದ್ದರೆ, ನಾಲ್ಕನೇ ಸೀಟಿಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಮತಗಳ ಲೆಕ್ಕಾಚಾರ ನೋಡಿದರೆ ಬಿಜೆಪಿ ಲೆಹರ್ ಸಿಂಗ್ಗೆ ಗೆಲುವಿನ ಸಾಧ್ಯತೆ ಹೆಚ್ಚಿದ್ದರೆ, ಜೆಡಿಎಸ್ನ ಕುಪ್ಪೇಂದ್ರ ರೆಡ್ಡಿ ಗೆಲುವು ಅಸಾಧ್ಯ ಎನ್ನಲಾಗುವುದಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವು ಬಹುತೇಕ ಅಸಾಧ್ಯ ಎನ್ನಬಹುದು.
ಸದ್ಯದ ಮತಗಳ ಲೆಕ್ಕಾಚಾರ ಹೇಗಿದೆ?:ಅಭ್ಯರ್ಥಿಯ ಗೆಲುವಿಗೆ 45 ಮತಗಳ ಅಗತ್ಯವಿದೆ. ಇದನ್ನು ಮೊದಲ ಪ್ರಾಶಸ್ತ್ಯದ ಮತಗಳು ಎನ್ನಲಾಗುತ್ತದೆ. ಅದರಂತೆ ಬಿಜೆಪಿ ಶಾಸಕರ ಬಲ 122, ಕಾಂಗ್ರೆಸ್ ಶಾಸಕರ ಸಂಖ್ಯೆ 70 ಆಗಿದ್ದರೆ, ಜೆಡಿಎಸ್ ಶಾಸಕರ ಬಲ 32. ಆ ಪ್ರಕಾರ ಬಿಜೆಪಿಯ ಎರಡು ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗ್ಗೇಶ್ಗೆ ತಲಾ 45 ಮೊದಲ ಪ್ರಾಶಸ್ತ್ಯದ ಮತಗಳು ಲಭ್ಯವಾಗಲಿವೆ. ಅದೇ ರೀತಿ ಕಾಂಗ್ರೆಸ್ನ ಜಯರಾಂ ರಮೇಶ್ಗೆ ಮೊದಲ ಪ್ರಾಶಸ್ತ್ಯದ 45 ಮತಗಳು ಸಿಗಲಿದ್ದು, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಇತ್ತ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ. ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಕೇವಲ 32 ಇದೆ. ಜೆಡಿಎಸ್ಗೆ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆಯ ಅವಕಾಶ ಇಲ್ಲ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ನ ಒಬ್ಬ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ.
ನಾಲ್ಕನೇ ಸೀಟಿಗೆ ಮತ ಕೊರತೆ: ಈ ಬಾರಿ ರಾಜ್ಯದ ರಾಜ್ಯಸಭೆ ಕಣದಲ್ಲಿ ನಾಲ್ಕನೇ ಸೀಟಿನ ಚುನಾವಣೆ ಕೌತುಕಕ್ಕೆ ಕಾರಣವಾಗಿದೆ. ಮೂರು ಪಕ್ಷಗಳೂ ನಾಲ್ಕನೇ ಸೀಟಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆದರೆ ನಾಲ್ಕನೇ ಅಭ್ಯರ್ಥಿಗೆ ಮತಗಳ ಕೊರತೆ ಇದೆ. ಹೀಗಾಗಿ ನಾಲ್ಕನೇ ಸೀಟಿಗೆ ಕಣಕ್ಕಿಳಿದಿರುವ ಬಿಜೆಪಿಯ ಲೆಹರ್ ಸಿಂಗ್, ಕಾಂಗ್ರೆಸ್ನ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ನ ಕುಪ್ಪೇಂದ್ರ ರೆಡ್ಡಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ನಾಲ್ಕನೇ ಸೀಟಿಗಾಗಿನ ಜಿದ್ದಾಜಿದ್ದಿಯಲ್ಲಿ ಬಿಜೆಪಿಯ 122 ಮತಗಳ ಪೈಕಿ ತಲಾ 45ರಂತೆ 90 ಮತಗಳು ಇಬ್ಬರು ಅಭ್ಯರ್ಥಿಗಳ ಪಾಲಾಗಲಿವೆ. ಉಳಿಯುವ 32 ಮತಗಳು ಲೆಹರ್ ಸಿಂಗ್ ಗೆ ಹಂಚಿಕೆಯಾಗಲಿವೆ. ಇತ್ತ 70 ಮತಗಳು ಹೊಂದಿರುವ ಕಾಂಗ್ರೆಸ್ ನ 45 ಮತ ಜೈರಾಮ್ ರಮೇಶ್ ಪಾಲಾದರೆ, ಉಳಿದಿರುವ 25 ಮತಗಳು ಮನ್ಸೂರ್ ಅಲಿ ಖಾನ್ಗೆ ಹಂಚಿಕೆಯಾಗಲಿವೆ. ಜೆಡಿಎಸ್ನ ಮೊದಲ ಪ್ರಾಶಸ್ತ್ಯದ ಮತಗಳಾದ 32 ಕುಪ್ಪೇಂದ್ರ ರೆಡ್ಡಿ ಪಾಲಾಗುತ್ತವೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ತಲಾ 32 ಮೊದಲ ಪ್ರಾಶಸ್ತ್ಯದ ಮತಗಳಿವೆ. ಹೀಗಾಗಿ ಇಬ್ಬರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ.