ಬೆಂಗಳೂರು: ಕೋಲಾರ ಶಾಸಕ ಶ್ರೀನಿವಾಸ ಗೌಡರಿಗೆ ಈಗಾಗಲೇ ನಾನು ಹೇಳಿದ್ದೇನೆ. ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ರಾಜಕಾರಣ ಮಾಡಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.ರಾಜ್ಯಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಕೋಲಾರ ಜನರಿಗೆ ಮಾಡಿದ ಅವಮಾನ. ಪಕ್ಷದಿಂದ ಕ್ರಮ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ ಇಲ್ಲ ಎಂದರು.
ದೇಶದ ಕಾನೂನಿನಲ್ಲಿ ಶಿಕ್ಷೆ ಕೊಡುವಂಥ ಯಾವುದೇ ನಿಯಮವಿಲ್ಲ. ಕಾಂಗ್ರೆಸ್ನಲ್ಲಿ ಒಡನಾಟ ಇಟ್ಟಿರುವಂಥ ಆ ವ್ಯಕ್ತಿಗೆ ನೈತಿಕತೆ ಇಲ್ಲ. ಇದು ಕೀಳು ಮಟ್ಡದ ರಾಜಕಾರಣ. ಅವತ್ತು ಕಾಂಗ್ರೆಸ್ ಎಂಟು ಶಾಸಕರಿಂದ ಕ್ರಾಸ್ ವೋಟ್ ಮಾಡಿಸಿದ್ದರು. ಇವರು ಪ್ರಜಾಪ್ರಭುತ್ವ ಉಳಿಸ್ತಾರಾ?.. ಬಿಜೆಪಿಗೂ ಇವರಿಗೂ ಏನು ವ್ಯತ್ಯಾಸ ಇದೆ? ಎಂದು ಪ್ರಶ್ನಿಸಿದರು.
ಶ್ರೀನಿವಾಸ್ ಗೌಡರ ವೋಟ್ ಹಾಕಿಸಿಕೊಂಡಿರಿ ನಿಮಗೆ ಏನು ಸಿಗ್ತು. ನಿಮ್ಮ ಅಭ್ಯರ್ಥಿ ಗೆದ್ದರೆ ಕ್ರಾಸ್ ವೋಟ್ ಮಾಡಿಸಿದ್ದಕ್ಕೆ ಸಾರ್ಥಕ ಆಯ್ತು ಎನ್ನಬಹುದು. ಆದರೆ, ಇಲ್ಲಿ ಬಿಜೆಪಿ ಗೆಲ್ಲಿಸೋದಕ್ಕೆ ಹೀಗೆ ಮಾಡಿದಿರಿ. ಗುಬ್ಬಿ ಶಾಸಕ ಜೆಡಿಎಸ್ಗೆ ಮತ ಹಾಕುತ್ತೇನೆ ಅಂದ್ರು. ಆದರೆ, ಮತಪತ್ರದಲ್ಲಿ ಏನು ಮಾಡಿದರು?.. ಅವರು ಯಾರಿಗೂ ಮತ ಹಾಕಿಲ್ಲ. ಆದರೆ ಜನರ ಮುಂದೆ ಸುಳ್ಳು ಹೇಳಿದ್ದಾರೆ. ಇಂಥ ಕೀಳು ಮಟ್ಟದ ರಾಜಕಾರಣ ಮಾಡಬಾರದು. ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಅದಕ್ಕೆ ನೀವು ಕಾರಣ. ಕಾಂಗ್ರೆಸ್ನ ಬಣ್ಣ ಬಯಲಾಗಿದೆ. ನನ್ನ ಜೊತೆ ಅನುಕಂಪ ಇದ್ದ ಕೆಲವು ಕೈ ಶಾಸಕರ ಜೊತೆ ಮಾತನಾಡಿದ್ದೇನೆ. ಎರಡನೇ ಪ್ರಾಶಸ್ತ್ಯ ನಮಗೆ ಹಾಕಿ ಎಂದು ಮನವಿ ಮಾಡಿದ್ದೇನೆ ಎಂದರು.
ಇಷ್ಟು ಕೀಳು ಮಟ್ಟದ ರಾಜಕಾರಣ ಮಾಡಬೇಕಾ?:ಸಿದ್ದರಾಮಯ್ಯ ಅವರು 14 ಜನರನ್ನು ಕೂರಿಸಿದ್ದಾರೆ. ಇನ್ನೂ ಮತ ಚಲಾವಣೆಗೆ ಬಂದಿಲ್ಲ. ಬಹುಶಃ ಬಿಜೆಪಿ ಗೆಲ್ಲಿಸಲು ಇನ್ನೂ ಮತ ಹಾಕಲು ಬಂದಿಲ್ಲ. ಸಂಜೆ ಅವರ ಹಣಬರಹ ಗೊತ್ತಾಗುತ್ತದೆ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬೇಕಾ?.. ಮಂತ್ರಿ ಮಾಡಿದ್ದೇ ದೊಡ್ಡದು. ಜೆಡಿಎಸ್ಗೆ ಮತ ಕೊಟ್ಟಿದ್ದೇನೆ ಅಂತಾರೆ. ಆದರೆ, ಮಾಡ್ತಿರೋದೇನು?.. ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆಯಿಲ್ಲ. ಬಿಜೆಪಿ ಗೆದ್ದರೆ ಕಾಂಗ್ರೆಸ್ನಿಂದ ಗೆದ್ದಂತೆ. ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸ್ತಾರೆ ಎಂದರು.
ಜನರ ಗೌರವ ಹೆಚ್ಚಿಸುವವರಿಗೆ ಮತ: ಮತದಾನದ ಬಳಿಕ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನಾನು ಗುಪ್ತ ಮತದಾನವನ್ನು ಮಾಡಿದ್ದೇನೆ. ನಾನು ಯಾರಿಗೂ ಮತ ತೋರಿಸಿಲ್ಲ. ಮೂರು ತಲೆ ಮಾರಿನ ರಾಜಕಾರಣ ನಮ್ಮದು. ನಮ್ಮ ತಾಲೂಕಿನ ಜನರಿಗೆ ಘನತೆ ಗೌರವವನ್ನು ಸಿಗುತ್ತದೆಯೋ ಅವರಿಗೆ ಮತದಾನ ಮಾಡಿ ಬಂದಿದ್ದೇನೆ. ಅದು ಯಾರಿಗೆ ಹಾಕಿದ್ದೇನಿ ಅಂತ ನೀವು ಕಂಡುಕೊಳ್ಳಿ ಅಂತ ಪರೋಕ್ಷವಾಗಿ ಕಾಂಗ್ರೆಸ್ಗೆ ಮತದಾನ ಮಾಡಿರುವುದಾಗಿ ತಿಳಿಸಿದರು.
ಗೌರಿಶಂಕರ್ ಮತದಾನ: ತುಮಕೂರು ಗ್ರಾಮೀಣ ಜೆಡಿಎಸ್ ಶಾಸಕ ಗೌರಿ ಶಂಕರ್ ಮತದಾನ ಮಾಡಿದರು. ವಿದೇಶಿ ಪ್ರವಾಸದಲ್ಲಿದ್ದ ಗೌರಿ ಶಂಕರ್ ಮತದಾನಕ್ಕೆ ಗೈರಾಗ್ತಾರೆಂಬ ಮಾತಿತ್ತು. ಆದರೆ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಿರುವ ಅವರು ಇಂದು ಜೆಡಿಎಸ್ ನಾಯಕರ ಜೊತೆ ಆಗಮಿಸಿ ಮತದಾನ ಮಾಡಿದರು.