ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಳ ಜಗಳದ ಲಾಭ ಪಡೆದ ಬಿಜೆಪಿ ಗೆಲುವಿಗೆ ಮತಗಳ ಕೊರತೆಯ ನಡುವಿಯೂ ಹೆಚ್ಚುವರಿಯಾಗಿ ಬೋನಸ್ ಸೀಟ್ ಎನ್ನುವಂತೆ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ.
ನಾಲ್ಕನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ನಡೆದಿದ್ದರೆ, ಎರಡೂ ಪಕ್ಷಗಳಿಂದ ಜಂಟಿ ಅಭ್ಯರ್ಥಿಯಾಗಿ ಜೆಎಡಿಎಸ್ನ ಕುಪೇಂದ್ರ ರೆಡ್ಡಿ ಅಥವಾ ಕಾಂಗ್ರೆಸ್ನ ಮನ್ಸೂರ್ ಅಲಿಖಾನ್ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಿದ್ದರೆ ಖಂಡಿತ ಗೆಲ್ಲುವ ಅವಕಾಶವಿತ್ತು. ಆದರೆ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಕೊರತೆ ಹಾಗೂ ಪ್ರತಿಷ್ಠೆಯ ಫಲವಾಗಿ ಬಿಜೆಪಿ ಅನಾಯಾಸವಾಗಿ ಒಂದು ಸೀಟ್ನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿದೆ.
ನಾಲ್ಕು ಸ್ಥಾನಗಳಿಗೆ ನಡೆದ ರಾಜ್ಯ ಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಸಂಖ್ಯಾಬಲಕ್ಕೆ ಅನುಗುಣವಾಗಿ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಿತ್ತು. ನಾಲ್ಕನೇ ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಮತಗಳ ಕೊರತೆ ಇದ್ದವು. ಯಾವುದೇ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಆಗಿದ್ದರೆ ಮಾತ್ರ ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ನಾಲ್ಕನೇ ಅಭ್ಯರ್ಥಿ ಗೆಲ್ಲುವ ಅವಕಾಶವಿತ್ತು. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಅಂತಿಮವಾಗಿ ಕಣದಿಂದ ಹಿಂದೆ ಸರಿಸಲು ಸಮ್ಮತಿ ಸೂಚಿಸದೆ ಇರುವುದರಿಂದ ಅಂತಿಮವಾಗಿ ಬಿಜೆಪಿ ಈ ಬೆಳವಣಿಗೆಯ ಲಾಭ ಪಡೆದುಕೊಂಡಿತು.
ಹಠದಿಂದ ಕಮಲಕ್ಕೆ ಲಾಭ:ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಠಮಾರಿ ಧೋರಣೆಯಿಂದ ಬಿಜೆಪಿಗೆ ಲಾಭವಾಗಿದೆ. ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ಗೆಲ್ಲಲು 20 ಮತಗಳ ಅವಶ್ಯಕತೆಯಿತ್ತು. ಜೆಡಿಎಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಅಗತ್ಯತೆ ಇತ್ತು. ಇಬ್ಬರ ನಡುವೆ ಹೊಂದಾಣಿಕೆ ನಡೆಯದಿದ್ದರೆ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲಲು ಸಹಾಯವಾಗುತ್ತದೆ ಎನ್ನುವ ಸತ್ಯ ತಿಳಿದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಹೊಂದಾಣಿಕೆಯಿಂದ ಮೈತ್ರಿ ಅಭ್ಯರ್ಥಿ ನಿಲ್ಲಿಸಲು ಎರಡೂ ಪಕ್ಷಗಳ ನಾಯಕರಲ್ಲಿ ಸಹಮತ ಮೂಡಲಿಲ್ಲ.
ಜೆಡಿಎಸ್ ಆರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್ನ್ನು ನೇರವಾಗಿ ಸಂಪರ್ಕಿಸಿರುವುದು ಕಾಂಗ್ರೆಸ್ನ ರಾಜ್ಯಮಟ್ಟದ ನಾಯಕರಿಗೆ ಸರಿ ಕಾಣಲಿಲ್ಲವೆಂದು ಹೇಳಲಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿಸಲು ಒಂದು ಹಂತದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಲು ಸಿದ್ಧವಿದ್ದರೂ ರಾಜ್ಯದ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಮೈತ್ರಿಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತೊಂದರೆಯಾಗಲಿದೆ. ಮತದಾರರಿಗೆ ತಪ್ಪು ಸಂದೇಶ ಹೋಗಲಿದೆ ಎನ್ನುವ ವಾದ ಮುಂದಿಟ್ಟು ಜೆಡಿಎಸ್ಗೆ ಸಹಕಾರ ನೀಡುವುದನ್ನು ತಡೆಹಿಡಿದರೆನ್ನಲಾಗಿದೆ.