ಬೆಂಗಳೂರು: ರಾಜ್ಯಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇತ್ತ ಕಾಂಗ್ರೆಸ್ ನಾಯಕರು ಕೈ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಅಂತಿಮ ತೀರ್ಮಾಣ ಕೈಗೊಳ್ಳದೇ ಗೊಂದಲಕ್ಕೀಡಾಗಿದ್ದಾರೆ.
ಈಗಾಗಲೇ ರಾಜ್ಯಸಭೆ ಉಪಕದನಕ್ಕೆ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಇತ್ತ ರಾಜ್ಯ ಕಾಂಗ್ರೆಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಆಥವಾ ಬೇಡವೇ ಎಂಬುದರ ಬಗ್ಗೆ ಇನ್ನೂ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಭೆ ಸೇರಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸುವ ಹಂತದಲ್ಲಿದ್ದಾರೆ.
ಉಪ ಚುನಾವಣೆಯ ರಿಸಲ್ಟ್ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಸದ್ಯಕ್ಕೆ ಕಾಂಗ್ರೆಸ್ಗೆ ಸಂಖ್ಯಾಬಲದ ಕೊರತೆ ಇದೆ. ಉಪಚುನಾವಣೆ ಫಲಿತಾಂಶದ ಬಳಿಕ ಬಲಾಬಲದ ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಡಿಸೆಂಬರ್ 2ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿಸೆಂಬರ್ 5 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಇತ್ತ ಡಿ.5 ರಂದು ವಿಧಾನಸಭೆ 15 ಕ್ಷೇತ್ರಗಳ ಉಪ ಚುನಾವಣೆ ಮತದಾನ ನಡೆಯಲಿದೆ. ಡಿಸೆಂಬರ್ 9 ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಅದರ ಆಧಾರದಲ್ಲಿ ಕಾಂಗ್ರೆಸ್ಗೆ ತನ್ನ ಸಂಖ್ಯಾಬಲದ ಸ್ಪಷ್ಟ ಲೆಕ್ಕಾಚಾರ ಸಿಗಲಿದೆ. ಹೀಗಾಗಿ ಏನು ಮಾಡುವುದು ಎಂಬ ಗೊಂದಲದಲ್ಲಿದೆ.