ಬೆಂಗಳೂರು:ಡಿಸೆಂಬರ್ 12ಕ್ಕೆ ರಾಜ್ಯಸಭೆ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ. ರಾಮಮೂರ್ತಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಕುಟುಂಬ ಸಮೇತರಾಗಿ ಬಂದ ಕೆ.ಸಿ.ರಾಮಮೂರ್ತಿ, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ, ರಾಮಮೂರ್ತಿಗೆ ಕಂದಾಯ ಸಚಿವ ಆರ್. ಅಶೋಕ್, ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸೇರಿ ಹಲವು ಬಿಜೆಪಿ ನಾಯಕರು ಸಾಥ್ ನೀಡಿದರು.
ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ರಾಮಮೂರ್ತಿ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ, ಐಟಿ ಭಯಕ್ಕೆ ನಾನು ಹೆದರಿ ಬಿಜೆಪಿಗೆ ಹೋಗಿಲ್ಲ. ಈಗಾಗಲೇ ಹಲವು ಬಾರಿ ಈ ಬಗ್ಗೆ ಹೇಳಿದ್ದೇನೆ. ನನ್ನ ಆತ್ಮಸಾಕ್ಷಿಗಾಗಿ ನಾನು ಬಿಜೆಪಿ ಸೇರಿದ್ದೇನೆ. ಪದೇ ಪದೆ ಐಟಿ ದಾಳಿ ಬಗ್ಗೆ ಕೇಳಬೇಡಿ. ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಮೋದಿ ಅವರ ಅಭಿವೃದ್ದಿ ಕಾರ್ಯ ನೋಡಿ ಬಿಜೆಪಿ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ಕೆ.ಸಿ.ರಾಮಮೂರ್ತಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಈಗ ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಅಭೂತಪೂರ್ವವಾಗಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಮಮೂರ್ತಿ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ರಾಜ್ಯಸಭೆಯಲ್ಲಿ ನಮ್ಮ ಸ್ಥಾನ ಹೆಚ್ಚಾಗುತ್ತಿದೆ. ರಾಮಮೂರ್ತಿಗೆ ಯಾವುದೇ ಸವಾಲು ಇಲ್ಲ. ಯಾವುದೇ ಚುನಾವಣೆ ಇಲ್ಲದೇ ಅವರು ಜಯಿಸುತ್ತಾರೆ. ಈ ಮುಂಚೆ ರಾಜ್ಯಸಭೆಯಿಂದ ಬಿಲ್ ಪಾಸ್ ಗೆ ಹಿನ್ನಡೆಯಾಗುತ್ತಿತ್ತು. ಈಗ ನಮ್ಮ ಸದಸ್ಯರು ಹೆಚ್ಚಾಗುವುದರಿಂದ ಒಳಿತಾಗಲಿದೆ ಎಂದರು.