ಬೆಂಗಳೂರು: ಮಳೆಯಿಂದ ಬೆಂಗಳೂರಿಗೆ ಆಗುವ ಅನಾಹುತ ತಪ್ಪಿಸಲು ರಾಜಕಾಲುವೆಗಳ ಅಭಿವೃದ್ಧಿಯನ್ನು ಸಮಗ್ರವಾಗಿ ಕೈಗೊಳ್ಳಲಾಗುತ್ತಿದ್ದು, ಕೆರೆಗಳಿಗೆ ಸ್ಟ್ಲೂಯೀಸ್ ಗೇಟ್‌ಗಳನ್ನು ಅಳವಡಿಸಲು ಆದೇಶಿಸಲಾಗಿದೆ. ಯಾವುದೇ ಮುಲಾಜಿಲ್ಲದೇ ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾಲುವೆಗಳ ಮಾಸ್ಟರ್ ಪ್ಲಾನ್‌ನ್ನು ಮತ್ತೆ ಪರಿಷ್ಕರಿಸಿ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕಾಲಮಿತಿಯಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ ರಾಜ ಕಾಲುವೆ ಅಭಿವೃದ್ಧಿಪಡಿಸುತ್ತೇವೆ ಎಂದರು.
ಎರಡು ವರ್ಷದಲ್ಲಿ ರಾಜಕಾಲುವೆ ಕಾಮಗಾರಿ ಸಂಪೂರ್ಣ: ಬೆಂಗಳೂರು ನಗರದಲ್ಲಿ 850 ಕಿಮೀ ರಾಜಕಾಲುವೆ ಇದೆ. ಈ ಪೈಕಿ 450 ಕಿಮೀ ಅಭಿವೃದ್ಧಿಗೆ ಬಾಕಿಯಿದೆ. ಕಳೆದ ಬಾರಿ 1500 ಕೋಟಿ ರೂ.ನ್ನು ರಾಜಕಾಲುವೆ ಅಭಿವೃದ್ಧಿಗೆ ಮೀಸಲಿಟ್ಟಿದ್ದೆವು. ಈ ಬಾರಿ ಮತ್ತೆ ಹೆಚ್ಚುವರಿಯಾಗಿ 300 ಕೋಟಿ ರೂ. ನೀಡುತ್ತೇವೆ. ಎರಡು ವರ್ಷದಲ್ಲಿ ನಾವು ಈ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಎಂದು ಸಿಎಂ ಹೇಳಿದರು.
ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವು, ಸಮಗ್ರ ಅಭಿವೃದ್ಧಿಗೆ ಒತ್ತು: ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಎಂಟು ವಿಭಾಗಗಳ ಪೈಕಿ ಎರಡು ಕಡೆ ಮಾತ್ರ ರಾಜಕಾಲುವೆ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಬೆಂಗಳೂರಿನಿಂದ ಒಟ್ಟು ಹೊರ ಹೋಗುವ ನೀರಿನ ಪೈಕಿ ಶೇ.80 ರಷ್ಟು ಇಲ್ಲಿಂದ ಹಾದು ಹೋಗುತ್ತದೆ. 69 ಕೆರೆ ಇಲ್ಲಿದೆ. ಹೀಗಾಗಿ ಸಮಸ್ಯೆ ಹೆಚ್ಚಿದೆ ಎಂದು ಹೇಳಿದರು. ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಅತಿಕ್ರಮಣ ಮಾಡಿರುವುದು ಅಡ್ಡಿಯಾಗಿದೆ. ಮೊದಲು ಕಟ್ಟಡ ಅತಿಕ್ರಮಣಗಳನ್ನು ತೆರವುಗೊಳಿಸಿ ರಾಜಕಾಲುವೆಗಳ ಅಭಿವೃದ್ಧಿ ಮಾಡಬೇಕಾಗುತ್ತದೆ. ರಾಜಕಾಲುವೆ ಅಭಿವೃದ್ಧಿ ಸರಳವಲ್ಲ. ಸಂಕೀರ್ಣತೆಯಿಂದ ಕೂಡಿದೆ ಎಂದು ಅವರು ಇದೇ ವೇಳೆ ಹೇಳಿದರು.
ಮಹದೇವಪುರ ವಲಯದಲ್ಲಿ ಹೆಚ್ಚಿನ ಸಮಸ್ಯೆ: ಬೆಂಗಳೂರಿನಲ್ಲಿ ಮಳೆಯಾದರೆ ಎರಡು ವಲಯಗಳಲ್ಲಿ ಅದರಲ್ಲೂ ಮಹದೇವಪುರ ವಲಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಾಗಿ ಈಗಿನ ಮಳೆಗೆ ತಕ್ಕಂತೆ ರಾಜಕಾಲುವೆಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಈಗಿನ ದೊಡ್ಡ ಮಳೆಗೆ ರಾಜಕಾಲುವೆಗಳು ಉಕ್ಕಿ ಹರಿಯುವ ಸಾಧ್ಯತೆಗಳಿವೆ. ಇದಕ್ಕೆಲ್ಲ ಸಮಯ ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಆಗಿದ್ದ ಕಾಮಗಾರಿಗಳು ಈಗ ನಡೆಯುತ್ತಿವೆ. ಸಂಪೂರ್ಣ ರಾಜಕಾಲುವೆಗಳ ಅಭಿವೃದ್ಧಿಗೆ ಒಂದೂವರೆ ವರ್ಷವಾದರೂ ಬೇಕಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ: ಕಳೆದ ಮೂರು ವರ್ಷಗಳಲ್ಲಿ 33.14 ಕಿ.ಮೀ. ಉದ್ದದ ಬಾಕ್ಸ್ ಡ್ರೈನ್ ಹಾಗೂ 30.31 ಕಿ.ಮೀ. ಉದ್ದ ಯೂಶೇಪ್ ಡ್ರೈನ್‌ನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಉಳಿದ 490 ಕಿ.ಮೀ. ಉದ್ದ ಪ್ರಥಮ ಹಾಗೂ ದ್ವಿತೀಯ ಹಂತದ ರಾಜಕಾಲುವೆ ಅಭಿವೃದ್ಧಿಪಡಿಸಬೇಕಾಗಿದೆ. ಈ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಅಮೃತ ನಗರ ಯೋಜನೆಯಲ್ಲೂ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ನೀಡಲಾಗಿದ್ದು, ಈ ಅನುದಾನದಲ್ಲೂ ಸ್ವಲ್ಪ ಹಣವನ್ನು ರಾಜಕಾಲುವೆಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ ಎಂದರು.
ಭಾರೀ ಮಳೆಯಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ: ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಕೃಷ್ಣ ಭೈರೇಗೌಡ ಅವರು ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗಿದೆ. ಹಾಗಾಗಿ ಸರ್ಕಾರ ಬೇರೆಯವರನ್ನು ದೂಷಿಸದೇ ರಾಜಕಾಲುವೆಗಳ ಅಭಿವೃದ್ಧಿಗೆ ನಿರಂತರ ಕಾರ್ಯಕ್ರಮ ರೂಪಿಸಬೇಕು. ರಾಜಕಾಲುವೆಗಳ ಅಭಿವೃದ್ಧಿಯಾದರೆ ಶೇ. 80 ರಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ನೋಯ್ಡಾ ಮಾದರಿಯಲ್ಲಿ ಅಕ್ರಮ ಕಟ್ಟಡಗಳಿಗೆ ಸ್ಫೋಟಕ ಇಟ್ಟು ತೆರವು: ಸಚಿವ ಆರ್ ಅಶೋಕ್