ಬೆಂಗಳೂರು: ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದಾಗ ವಿಶ್ವದ ಅನೇಕ ದೇಶಗಳು ಆಕರ್ಷಿತರಾಗಿ ನಮ್ಮ ಅಲಿಪ್ತ ನೀತಿಗೆ ಬದ್ಧವಾಗಿ ರಷ್ಯಾ ಅಥವಾ ಅಮೆರಿಕ ಪರವಾಗಿ ನಿಲ್ಲಬಾರದು ಎಂಬ ಧೋರಣೆಯನ್ನು ಮುಂದುವರಿಸಿದರು. ಇದೇ ನೀತಿಯನ್ನು ಉಕ್ರೇನ್ ರಷ್ಯಾ ಯುದ್ಧದಲ್ಲಿ ಅನುಸರಿಸಲಾಯಿತು. ಆದರೆ, ಬಿಜೆಪಿಯವರು ತಮ್ಮ ನೀತಿ ಎಂದು ಹೇಳಿಕೊಳ್ಳುತ್ತಾರೆ. ಇವರು ಕೇವಲ ಹೆಸರು ಬದಲಾವಣೆ ಮಾಡುವುದಷ್ಟೇ. ಇವರ ಸ್ವಂತ ಬಂಡವಾಳ ಯಾವುದೂ ಇಲ್ಲ ಎಂದು ಖರ್ಗೆ ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜೀವ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿ, ಹೆಡೆಗೆವಾರ್ ಅವರ ಪಠ್ಯವನ್ನು ಯಾಕೆ ಸೇರಿಸಬೇಕು? ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳೇನು? 1925ರಲ್ಲಿ ಹುಟ್ಟಿದ ಆರ್ಎಸ್ಎಸ್ ಅನ್ನು ಕೇವಲ 4 ಮಂದಿ ನೋಂದಣಿ ಮಾಡಿದ್ದರು. 5 ವರ್ಷಗಳ ನಂತರ ಪದಾಧಿಕಾರಿಗಳ ಮಂಡಳಿಯಲ್ಲಿ ಕೇವಲ 90 ಜನ ಇದ್ದರು. ಅಂತಹವರು ಇಂದು ಬೆಳೆದು ನಿಂತು ಬಡವರನ್ನು, ಸಂವಿಧಾನ, ಪ್ರಜಾಪ್ರಭುತ್ವ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಮಾತನಾಡಿ, ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ತಂದು ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸಲಾಯಿತು. ಮಹಿಳೆಯರಿಗೆ ಮೀಸಲಾತಿ, ನೆರೆ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಿದರು. ಕಿರಿಯ ವಯಸ್ಸಿನಲ್ಲೇ ಪ್ರಧಾನಿಯಾಗಿ, ಕಿರಿಯ ವಯಸ್ಸಿನಲ್ಲೇ ಮೃತರಾದರು, ಇದರಿಂದ ದೇಶಕ್ಕೆ ನಷ್ಟವಾಯಿತು. ಇಂದಿನ ದುರಾದೃಷ್ಟ ಎಂದರೆ ಇಷ್ಟು ಪ್ರಧಾನಿಗಳು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಮಾರಲೆಂದೇ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಮತ್ತು ಮಾಜಿ ಸಚಿವ ದಿನೇಶ್ ಗುಂಡುರಾವ್ ಉಪಸ್ಥಿತರಿದ್ದರು.