ಬೆಂಗಳೂರು:ನೆಲಮಂಗಲದ ವಕೀಲ ಕೇಶವಮೂರ್ತಿ ಅವರ ಮಗ ವಕೀಲ ಅಮಿತ್ ಕೇಶವಮೂರ್ತಿ ಕೊಲೆ ಪ್ರಕರಣದಲ್ಲಿ ಆರೋಪಿ ರಾಜೇಶ್ ಗೌಡ ದೋಷಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಬುಧವಾರ ಘೋಷಿಸಿದರು. ಅಲ್ಲದೆ, ಶಿಕ್ಷೆಯ ಪ್ರಮಾಣವನ್ನು ಗುರುವಾರ (ನವೆಂಬರ್ 16) ಪ್ರಕಟಿಸುವುದಾಗಿ ತಿಳಿಸಿದರು.
ಪ್ರಕರಣದ ಹಿನ್ನೆಲೆ ಏನು ? :ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ 2017 ರ ಜನವರಿ 13 ರಂದು ಮಧ್ಯಾಹ್ನ 3.15 ರ ಸಮಯದಲ್ಲಿ ಅಮಿತ್ ಕೇಶವಮೂರ್ತಿ ಅವರು ಆರೋಪಿ ರಾಜೇಶ್ ಅವರ ಪತ್ನಿ ಪಿಡಿಒ ಶ್ರುತಿಗೌಡ ಅವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಕುಳಿತಿದ್ದರು. ಆಗ ಶ್ರುತಿ ಗೌಡ ಅವರಿಗೆ ಸೇರಿದ ಈ ಕಾರು ಹಿಂಬಾಲಿಸಿಕೊಂಡು ಬಂದಿದ್ದ ರಾಜೇಶ್, ಕಾರಿನ ಬಾಗಿಲು ತೆರೆದು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಅಮಿತ್ ಮೇಲೆ ಏಕಾಏಕಿ ಗುಂಡು ಹಾರಿಸಿ ಕೊಂದಿದ್ದ.