ಬೆಂಗಳೂರು:''ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಯಾವುದೇ ಯೋಜನೆ ತಂದಿಲ್ಲ. ಕೇಂದ್ರದ ಎಲ್ಲ ಯೋಜನೆಗಳು ಎಲ್ಲ ಸಮುದಾಯಕ್ಕೂ ಸಿಕ್ಕಿವೆ. ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಮಾಡಿರುವುದು. ಮುಸಲ್ಮಾನರನ್ನು ಹೊರಗಿಟ್ಟಿರುವುದನ್ನು ಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುವುದು'' ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಮುಸ್ಲಿಂ ಮೀಸಲಾತಿ ರದ್ದುಪಡಿಸಿದ್ದನ್ನು ಸಮರ್ಥಿಸಿಕೊಂಡು ಸಂವಿಧಾನ ಬದ್ಧವಾಗಿಲ್ಲದ ಮೀಸಲಾತಿ ರದ್ದುಪಡಿಸಲಾಗಿದೆ. ಆದರೆ, ಅವರಿಗಿರುವ ಸವಲತ್ತುಗಳನ್ನು ತೆಗೆದಿಲ್ಲ. ನಮ್ಮ ಸರ್ಕಾರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಎನ್ನುವ ತತ್ವದ ಅಡಿ ಇದೆ. ಮುಸ್ಲಿಂ , ಕ್ರಿಶ್ಚಿಯನ್ ಹಿಂದೂ ಎಲ್ಲ ಧರ್ಮದ ಜನರಿಗೂ ನಮ್ಮ ಸರ್ಕಾರ ಎಲ್ಲ ಸೌಲಭ್ಯ ನೀಡಿದೆ. ಮುಸ್ಲಿಮರಿಗೆ ಅನ್ಯಾಯ ಮಾಡಿತು ಎನ್ನುವುದು ಸುಳ್ಳು ಆರೋಪ. ಆ ರೀತಿ ಹೇಳುವುದು ವಿಪಕ್ಷಗಳ ಕೇವಲ ಪ್ರಚಾರ ಮಾತ್ರ. ಕೇಂದ್ರದ ಯಾವುದೇ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ಎಲ್ಲ ಯೋಜನೆಗಳು ಎಲ್ಲ ಸಮುದಾಯದ ಜನರಿಗೆ ಸಮಾನವಾಗಿ ತಲುಪಿದೆ. ಯಾವ ಯೋಜನೆಯಿಂದ ಯಾವುದೇ ಸಮುದಾಯವನ್ನೂ ಹೊರಗಿಟ್ಟಿಲ್ಲ. ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ತಾರತಮ್ಯ ಮಾಡಿದ್ದು, ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದರು.
ಭ್ರಷ್ಟಾಚಾರದ ಆರೋಪ ಸುಳ್ಳು -ರಾಜೀವ್ ಚಂದ್ರಶೇಖರ್:''ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಯಾವುದೇ ಸರ್ವೆ ವರದಿ ಏನೇ ಹೇಳಲಿ, ರಿಯಲ್ ಸರ್ವೆ ವರದಿ ಮೇ 13ಕ್ಕೆ ಬರಲಿದೆ. ಅದರಲ್ಲಿ ನಾವೇ ಗೆದ್ದಿರುತ್ತೇವೆ ಎಂದರು. ಯಾವುದೇ ವಿಷಯ ಇಲ್ಲದ ಕಾರಣಕ್ಕೆ 40 ಪರ್ಸೆಂಟ್ ಆರೋಪ ಮಾಡುತ್ತಿದ್ದಾರೆ. ಯಾವ ಪಕ್ಷ ಲೋಕಾಯುಕ್ತದ ಅಧಿಕಾರ ಮೊಟಕು ಮಾಡಿತು. ಯಾವ ಪಕ್ಷ ಮತ್ತೆ ಲೋಕಾಯುಕ್ತ ಬಲಪಡಿಸಿತು ಎನ್ನುವುದನ್ನು ನೋಡಿದರೆ ಭ್ರಷ್ಟಾಚಾರದ ಆರೋಪ ಸುಳ್ಳು ಎನ್ನುವುದು ಗೊತ್ತಾಗಲಿದೆ. ಪೊಲಿಟಿಕ್ಸ್ ಆಫ್ ಲೈಸ್ ವರ್ಸೆಸ್ ಡೆವಲಪ್ಮೆಂಟ್ ಇಶ್ಯೂ ಇರಿಸಿಕೊಂಡು ಚುನಾವಣೆಗೆ ಹೋಗುತ್ತೇವೆ'' ಎಂದರು.