ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ನಡೆದ ಒಂದು ಉಪಚುನಾವಣೆ ಸೇರಿದಂತೆ ನಾಲ್ಕು ಚುನಾವಣೆಗಳ ಪೈಕಿ ಮೂರರಲ್ಲಿ ಗೆದ್ದಿರುವ ಮುನಿರತ್ನಗೆ ಈ ಸಲದ ವಿಧಾನಸಭೆ ಚುನಾವಣೆ ಕೊಂಚ ಸವಾಲಾಗಲಿದೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿರುವ ಮುನಿರತ್ನ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಹಾಗೂ ಒಮ್ಮೆ (ಉಪಚುನಾವಣೆ) ಬಿಜೆಪಿಯಿಂದ ಗೆದ್ದಿದ್ದಾರೆ. ಈ ಸಲ ಅವರು ಉಪಚುನಾವಣೆ ಸೇರಿದಂತೆ ಎರಡನೇ ಸಾರಿ ಎದುರಾಳಿಯಾಗಿರುವ ಕುಸುಮಾ ಹನುಮಂತರಾಯಪ್ಪ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ನಾರಾಯಣಸ್ವಾಮಿ ಕೂಡಾ ಸವಾಲಾಗುವ ಲಕ್ಷಣ ತೋರುತ್ತಿದೆ. ಈ ಬಾರಿಯೂ ಕಳೆದ ಸಲದಂತೆ 14 ಮಂದಿ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಪ್, ಬಿಎಸ್ಪಿ, ಕರ್ನಾಟಕ ರಾಷ್ಟ್ರೀಯ ಸಮಿತಿ, ಕಮ್ಯುನಿಸ್ಟ್ ಪಾರ್ಟಿ, ಉತ್ತಮ ಪ್ರಜಾಕೀಯ, ಜೆಡಿಯು ಹಾಗು ಜೈ ಮಹಾ ಭಾರತ್ ಪಕ್ಷದ ಅಭ್ಯರ್ಥಿಗಳೊಂದಿಗೆ ಪಕ್ಷೇತರರೂ ಅಖಾಡದಲ್ಲಿದ್ಗಾರೆ.
2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಶ್ರೀನಿವಾಸ್ ಇಲ್ಲಿ ಗೆಲುವು ಸಾಧಿಸಿದ್ದರು. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಮುನಿರತ್ನ ಗೆಲುವು ಪಡೆದಿದ್ದರು. 2019ರಲ್ಲಿ ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಗೆದ್ದರು. ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿರುವ ಮುನಿರತ್ನ, ಸದ್ಯಕ್ಕೆ ಕ್ಷೇತ್ರದ ಗೆಲುವಿನ ಫೇವರೆಟ್ ಅಭ್ಯರ್ಥಿ. ಆದರೆ, ಇತರರೂ ಸವಾಲೊಡ್ಡುವ ಸಾಧ್ಯತೆ ಇದೆ.
ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಒಂದಿಷ್ಟು ಅಭಿವೃದ್ಧಿ ಆಗಿರುವುದು ಗೊತ್ತಾಗುತ್ತದೆ. ಕಾಂಕ್ರಿಟ್ ರಸ್ತೆಗಳು, ಮೈದಾನಗಳ ಅಭಿವೃದ್ಧಿ, ಉದ್ಯಾನ, ಒಳಚರಂಡಿ, ರಾಜಕಾಲುವೆ ನಿರ್ಮಾಣ, ಸುಸಜ್ಜಿತ ಬಡಾವಣೆಗಳ ನಿರ್ಮಾಣ ಆಗಿದೆ. ಒಂದೆಡೆ ಮೈಸೂರು ಮುಖ್ಯರಸ್ತೆ, ಇನ್ನೊಂದೆಡೆ ಪ್ರಮುಖ ವಾಣಿಜ್ಯ ತಾಣವಾಗಿ ಅಭಿವೃದ್ಧಿ ಆಗಿರುವ ಕ್ಷೇತ್ರಕ್ಕೆ ರಾಜಕಾಲುವೆ ಹಾಗೂ ಮಳೆಗಾಲದಲ್ಲಿ ನೀರು ಉಕ್ಕಿ ಉಂಟಾಗುವ ಸಮಸ್ಯೆ ಅತ್ಯಂತ ದೊಡ್ಡದು. ಇದರ ನಿವಾರಣೆಗೆ ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ ಅತ್ಯಂತ ವಿಶಾಲವಾಗಿ ಹಾಗೂ ತ್ವರಿತವಾಗಿ ಬಡಾವಣೆ ಬೆಳೆಯುತ್ತಿದ್ದು ಮೂಲಭೂತಸೌಕರ್ಯ ಕಲ್ಪಿಸುವುದು ಸಹ ಕಠಿಣ ಕಾರ್ಯ.
ಬೆಂಗಳೂರಿನಲ್ಲಿಯೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ರಾಜರಾಜೇಶ್ವರಿನಗರದ್ದು. ಭೌಗೋಳಿಕವಾಗಿ ಯಶವಂತಪುರಕ್ಕಿಂತ ದೊಡ್ಡ ಕ್ಷೇತ್ರ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗವನ್ನು ತಮ್ಮ ವ್ಯಾಪ್ತಿಯಲ್ಲಿ ಹೊಂದಿದೆ. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಈ ಕ್ಷೇತ್ರ ರಾಜರಾಜೇಶ್ವರಿನಗರವಾಗಿ 2008ರಲ್ಲಿ ರೂಪುಗೊಂಡಿತು. ಕ್ಷೇತ್ರದಲ್ಲಿ 9 ವಾರ್ಡ್ಗಳಿದ್ದು, ರಾಜರಾಜೇಶ್ವರಿನಗರ, ಲಕ್ಷ್ಮಿದೇವಿ ನಗರ, ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ, ಹೆಚ್.ಎಂ.ಟಿ, ಲಗ್ಗೆರೆ, ಜ್ಞಾನಭಾರತಿ, ಕೊಟ್ಟಿಗೆಪಾಳ್ಯ ಆಗಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,78,300 ಮತದಾರರಿದ್ದಾರೆ. ಇದರಲ್ಲಿ 2,46,918 ಲಕ್ಷ ಪುರುಷ ಮತದಾರರು ಮತ್ತು 2,31,295 ಲಕ್ಷ ಮಹಿಳಾ ಮತದಾರರು ಹಾಗೂ 87 ಇತರರು ಇದ್ದು, ಒಕ್ಕಲಿಗ ಸಮುದಾಯದ್ದೇ ಪ್ರಾಬಲ್ಯವಿದೆ.