ಬೆಂಗಳೂರು:ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಕಣಕ್ಕಿಳಿದಿದ್ದು, ಇದೀಗ ವಿವಿಧ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ.
ಚುನಾವಣೆಗೆ ಕೆಲವೇ ದಿನ ಉಳಿದಿರುವ ಕಾರಣ ಕಾಂಗ್ರೆಸ್ ನಾಯಕರ ಮನೆಗಳಿಗೆ ಭೇಟಿ ನೀಡಿ ಪ್ರಚಾರಕ್ಕೆ ಆಗಮಿಸುವಂತೆ ಕುಸುಮಾ ಮನವಿ ಮಾಡುತ್ತಿದ್ದಾರೆ. ತಮ್ಮನ್ನ ಗೆಲ್ಲಿಸಲು ಸಹಕರಿಸುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಮೆಯನ್ನು ಹೆಚ್ಚಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಮಂಡ್ಯದಲ್ಲಿ ರೈತ ಸಮಾವೇಶದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶವನ್ನು ಕಾಂಗ್ರೆಸ್ ನಾಯಕರ ಭೇಟಿಗೆ ಹಾಗೂ ಬೆಂಬಲ ಕೇಳುವುದಕ್ಕೆ ಕುಸುಮಾ ಬಳಸಿಕೊಂಡರು.
ಕವಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡಿದ ಕುಸುಮಾ ಪ್ರಿಯಾಂಕ ಖರ್ಗೆ ಭೇಟಿ :
ಕಾಂಗ್ರೆಸ್ ಪಕ್ಷದ ಯುವ ನಾಯಕರು ಹಾಗೂ ಚಿತ್ತಾಪುರ ಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಅವರು ರಾಜರಾಜೇಶ್ವರಿ ನಗರದ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆದುಕೊಂಡರು.
ಕವಿ ಸಿದ್ದಲಿಂಗಯ್ಯ ಭೇಟಿ:
ರಾಜರಾಜೇಶ್ವರಿ ನಗರ ನಿವಾಸಿ, ಕವಿ ಸಿದ್ದಲಿಂಗಯ್ಯ ದಂಪತಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕುಸುಮಾ, ಅವರ ಸ್ಫೂರ್ತಿದಾಯಕ ಮಾತುಗಳು ಶಕ್ತಿ ನೀಡಿವೆ. ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಗಣ್ಯರು ಹಾಗೂ ಕಾಂಗ್ರೆಸ್ ಮುಖಂಡರನ್ನು ಖುದ್ದು ಭೇಟಿ ಮಾಡಿ ಬೆಂಬಲ ಕೋರುತ್ತಿರುವ ಅವರು ತಮಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಒಟ್ಟಾರೆ ಅವಧಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನವರನ್ನು ವಿಶ್ವಾಸಕ್ಕೆ ಪಡೆಯುವ ಹಾಗೂ ಗೆಲುವಿನ ತಂತ್ರಗಾರಿಕೆ ಹೆಣೆಯುವ ಕಾರ್ಯದಲ್ಲಿ ಕುಸುಮಾ ಹನುಮಂತರಾಯಪ್ಪ ನಿರತರಾಗಿದ್ದಾರೆ.