ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಗೆ ಸೇರಿದ ರಾಜರಾಜೇಶ್ವರಿನಗರ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿದೆ. ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಬಿಜೆಪಿಯಿಂದ ಎಂ.ಶ್ರೀನಿವಾಸ್ ಅವರು 19,592 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಿಜೆಪಿಯ ಎಂ.ಶ್ರೀನಿವಾಸ್ 60187 ಮತ ಪಡೆದು ಗೆದ್ದು ಬೀಗಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪಿ.ಎನ್. ಕೃಷ್ಣಮೂರ್ತಿ ಅವರಿಗೆ 40595 ಮತಗಳು ಬಂದಿದ್ದರೆ, ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಹನುಮಂತರಾಯಪ್ಪ 36785 ಮತಗಳನ್ನು ಗಳಿಸಿದ್ದರು. ಸಿನಿಮಾರಂಗದಲ್ಲಿದ್ದ ಮುನಿರತ್ನ ಅವರು 2013ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು.
ರಾಜಕೀಯದಲ್ಲಿ ಪ್ರಬಲರಾಗಿದ್ದ ಅವರು, 2013 ರಲ್ಲಿ ನಡೆದ ಆರ್.ಆರ್.ನಗರ ವಿಧಾನಸಭಾ ಚುನಾವಣೆಯಲ್ಲಿ 18,813 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2008 ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ 2013 ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.
ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಅವರು 71064 ಪಡೆದುಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರು 50726 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರೆ, ಜೆಡಿಎಸ್ ನ ತಿಮ್ಮನಂಜಯ್ಯ ಅವರು 52251 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡರು.
2018ರ ವೇಳೆಗೆ ಮುನಿರತ್ನ ಅವರು ರಾಜಕೀಯ ಚಾಣಾಕ್ಷತನದಿಂದ ಮತ್ತು ಮತದಾರರ ವಿಶ್ವಾಸವನ್ನು ಹೆಚ್ವಿಸಿಕೊಂಡು ಕ್ಷೇತ್ರವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದರು. 2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳು ಮತ್ತು ಇತರ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾದ ನಂತರ ಚುನಾವಣೆಯನ್ನು ಮುಂದೂಡಲಾಗಿತ್ತು. 2018ರ ಮೇ 28ರಂದು ಮತದಾನ ನಡೆದು ಮತ ಎಣಿಕೆ ಮೇ 31ರಂದು ನಡೆದು ಮುನಿರತ್ನ ಅವರು 25,492 ಮತಗಳ ಅಂತರದಿಂದ ಜಯಗಳಿಸಿದ್ದರು. 2018ರಲ್ಲಿ ಎಂ. ಶ್ರೀನಿವಾಸ್ ಅವರ ಬದಲಿಗೆ ತುಳಸಿ ಮುನಿರಾಜುಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.
2018ರಲ್ಲಿ ಕಾಂಗ್ರೆಸ್‌ನ ಮುನಿರತ್ನ ಅವರು 108064 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ 82572 ಮತಗಳನ್ನು ಗಳಿಸಿದ್ದರು. 2013 ರಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿಜೆಪಿ ಮಾಜಿ ಕಾರ್ಪೊರೇಟರ್ ಜಿ.ಹೆಚ್. ರಾಮಚಂದ್ರ ಅವರು 60360 ಮತಗಳನ್ನು ಗಳಿಸಿದ್ದರು.
ಚುನಾವಣೆಯ ಮೂರು ದಿನಗಳ ಮೊದಲು ಅಂದರೆ 2018 ಮೇ 9 ರಂದು ಜಾಲಹಳ್ಳಿ ಫ್ಲ್ಯಾಟ್ ವೊಂದರಲ್ಲಿ 9,567 ನಕಲಿ ಮತದಾರರ ಫೋಟೋ ಗುರುತಿನ ಚೀಟಿಗಳು ಪತ್ತೆಯಾದ್ದವು.ಇದನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ಮುನಿರತ್ನ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.