ಬೆಂಗಳೂರು: ರಾಜಧಾನಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಲು ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ನಡೆಯಬೇಕಾಗಿದೆ. ಈಗಾಗಲೇ ಗುರುತು ಮಾಡಿದಷ್ಟು ಒತ್ತುವರಿ ತೆರವು ಮಾಡಲಾಗಿದೆ. ಕಂದಾಯ ಇಲಾಖೆ ಜೊತೆ ಜಂಟಿಯಾಗಿ ಸರ್ವೇ ಮಾಡಬೇಕಿದೆ. ಹೀಗಾಗಿ ಇದಕ್ಕೆ ಕಾಲಾವಕಾಶ ಬೇಕು. ನಾವು ಕಂದಾಯ ಇಲಾಖೆ ಜೊತೆ ಚರ್ಚೆ ಮಾಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದವರ ಒತ್ತುವರಿ ಮರು ಸರ್ವೇ ಮಾಡುತ್ತಿದ್ದೇವೆ. ಎಲ್ಲೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿಲ್ಲ. ಆದರೆ, ಮತ್ತಷ್ಟು ಸಿದ್ಧತೆ ಆಗಬೇಕಿದೆ ಎಂದರು.
ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿ ತೆರವು:ಸದ್ಯಕ್ಕೆ ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿ ಮಾತ್ರ ತೆರವು ಮಾಡುತ್ತೇವೆ. ಬಫರ್ ಝೋನ್ ತೆರವು ಮಾಡೋದು ಸುಲಭದ ಮಾತಲ್ಲ. ಅದಕ್ಕಂತಲೇ ಒಂದಿಷ್ಟು ರೀತಿ ರಿವಾಜುಗಳಿವೆ, ಅದನ್ನು ಪಾಲಿಸಬೇಕು. ಮುಂದಕ್ಕೆ ನಡೆಯುವ ಸರ್ವೇಗಳಲ್ಲಿ ಕೆಲವು ಕಡೆ ಬಫರ್ ಝೋನ್ಗಳಲ್ಲೂ ಸರ್ವೇ ಮಾಡಲಾಗುತ್ತದೆ ಎಂದು ಉಲ್ಲೇಖಿಸಿದರು.