ಬೆಂಗಳೂರು: ನಗರ ಜಿಲ್ಲೆಯ ಪೂರ್ವ ತಾಲೂಕು ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿಯನ್ನು ತುರ್ತಾಗಿ ಮರು ಸಮೀಕ್ಷೆ ನಡೆಸಿ ಮಾರ್ಕಿಂಗ್ ಮಾಡಿಕೊಡುವಂತೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಬಿಬಿಎಂಪಿ ಕೆರೆಗಳ ವಿಭಾಗದಿಂದ ಪತ್ರ ಬರೆಯಲಾಗಿದೆ.
ಬಿಬಿಎಂಪಿ ಕಳೆದ ಒಂದು ತಿಂಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಒಟ್ಟು 94 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ. ಈ ಪೈಕಿ ಪೂರ್ವ ವಲಯದಲ್ಲಿನ ಮಹದೇವಪುರ, ಕೆಆರ್ಪುರಂ, ಮುನೇಕೊಳಾಲು, ಬೆಳ್ಳಂದೂರು, ವೈಟ್‌ಫೀಲ್ಡ್, ಬೆನ್ನಿಗಾನಹಳ್ಳಿ, ಕಸವನಹಳ್ಳಿ, ದೊಡ್ಡನೆಕ್ಕುಂದಿ ಮುಂತಾದೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದೆ.
ಇದೇ ಅವಧಿಯಲ್ಲಿ ಕೆರೆಯ ಒತ್ತುವರಿಯನ್ನು ತೆರವು ಮಾಡಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆ ಪೂರ್ವ ತಾಲೂಕು ವ್ಯಾಪ್ತಿಯಲ್ಲಿನ 30 ಕೆರೆಗಳ ಒತ್ತುವರಿಯನ್ನು ಮರು ಸಮೀಕ್ಷೆ ಮಾಡಿ ತೆರವು ಮಾಡಬೇಕಿರುವ ಭಾಗವನ್ನು ಮಾರ್ಕಿಂಗ್ ಮಾಡುವಂತೆ ತಿಳಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಒತ್ತುವರಿ ಮತ್ತು ತೆರವು ಕಾರ್ಯದ ಬಗ್ಗೆ ಮಾಹಿತಿ ನೀಡಬೇಕಿರುವ ಹಿನ್ನೆಲೆ ಈ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
2020ರಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಜಿಲ್ಲಾಡಳಿತ ವತಿಯಿಂದ 4 ವಿಶೇಷ ತಹಶಿಲ್ದಾರರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕೆಲವು ಕೆರೆಗಳಲ್ಲಿ ಸಣ್ಣಪುಟ್ಟ ಒತ್ತುವರಿ ಮಾತ್ರ ತೆರವು ಮಾಡಿದ್ದಾರೆ. ಉಳಿದಂತೆ, ಒತ್ತುವರಿದಾರರಿಗೆ ನೋಟಿಸ್ ನೀಡಿ ತೆರವು ಕಾರ್ಯಕ್ಕೆ ಮುಂದಾದಾಗ ಮರು ಸಮೀಕ್ಷೆ ಮಾಡುವಂತೆ ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಜತೆಗೆ, ಕೆಲವು ಒತ್ತುವರಿದಾರರು ಪಾಲಿಕೆ ಅಧಿಕಾರಿಗಳ ಮೇಲೆ ಜಾತಿ ನಿಂದನೆ, ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಕೆರೆಗಳ ಮರು ಸಮೀಕ್ಷೆ ಮಾಡುವಂತೆ ಕಳೆದೆರಡು ವರ್ಷಗಳಿಂದ 4ಕ್ಕಿಂತ ಅಧಿಕ ಬಾರಿ ಜಿಲ್ಲಾಡಳಿತ ಮತ್ತು ಭೂಮಾಪನ ಇಲಾಖೆಗೆ ಪಾಲಿಕೆಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.