ಬೆಂಗಳೂರು:ರಾಜಾಜಿನಗರ ರಾಮಂದಿರ ಆಟದ ಮೈದಾನದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ವಿಚಾರದ ಕುರಿತು ಸಲ್ಲಿಸಿರುವ ಅರ್ಜಿಗೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿದೆ. ರಾಮಮಂದಿರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಆರ್.ಹೇಮಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆಯ ವೇಳೆ ಪ್ರತಿವಾದಿಗಳಾದ ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ಜಂಟಿ ಆಯುಕ್ತರು, ಪಾಲಿಕೆಯ ರಾಜಾಜಿನಗರ ವಲಯದ ಕಾರ್ಯಕಾರಿ ಎಂಜಿನಿಯರ್ ಮತ್ತು ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ನಗರೋತ್ಥಾನ ಯೋಜನೆಯಡಿ 2022ರ ಏ 10ರಂದು ಆಟದ ಮೈದಾನದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೇಳಿದ್ದರು. ಆದರೆ ಎರಡು ತಿಂಗಳ ಅಧಿಕ ಸಮಯ ಕಳೆದರು ಕಾಮಗಾರಿ ನಡೆಸಿಲ್ಲ ಇದರಿಂದ ಮೈದಾನ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.