ಕರ್ನಾಟಕ

karnataka

ETV Bharat / state

ಬಿಜೆಪಿ ಭದ್ರಕೋಟೆಯಲ್ಲಿ ಪ್ರತಿ ಬಾರಿ ಮತ ಗಳಿಕೆ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್.. ಹೇಗಿದೆ ಜೆಡಿಎಸ್​ ಪೈಪೋಟಿ? - rajajinagar assembly constituency profile

ರಾಜಾಜಿನಗರ ಮತಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳುತ್ತಾ? ಪ್ರತಿ ವರ್ಷವೂ ಮತಗಳಿಕೆ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ಕಮಾಲ್ ಮಾಡುತ್ತಾ? ಅಥವಾ ದಳಪತಿಗಳ ಕೋಟೆ ನಿರ್ಮಾಣವಾಗುತ್ತಾ? ಎಂಬ ಚರ್ಚೆಗಳು ನಡೆಯುತ್ತಿವೆ.

rajajinagar assembly constituency profile
rajajinagar assembly constituency profile

By

Published : Mar 22, 2023, 8:03 PM IST

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನ ಬಿಜೆಪಿ ಭದ್ರಕೋಟೆಗಳಲ್ಲಿ ರಾಜಾಜಿನಗರ ಕೂಡ ಒಂದು. ಕಳೆದ ಮೂರು ಬಾರಿ ಸತತವಾಗಿ ಬಿಜೆಪಿ ಅಭ್ಯರ್ಥಿ ಕೈ ಹಿಡಿದಿರುವ ಕ್ಷೇತ್ರವೂ ಹೌದು. ಉತ್ತರ ಕರ್ನಾಟಕ ಭಾಗಕ್ಕೆ ಸಾಗಲು ರಹದಾರಿಯಂತಿರುವ ರಾಜಾಜಿನಗರ ಕ್ಷೇತ್ರಗಳಲ್ಲಿ ಉತ್ತಮ ಮೂಲಸೌಕರ್ಯಗಳ ಜೊತೆಗೆ ಸಮಸ್ಯೆಗಳೂ ಇವೆ.

ಬಡ, ಮಧ್ಯಮ, ಕಾರ್ಮಿಕ ಸಮುದಾಯವನನೇ ಹೊಂದಿರುವ ಈ ಕ್ಷೇತ್ರ, ಕಮರ್ಷಿಯಲ್ ಸ್ಪಾಟ್​ಗಳನ್ನು ಹೊಂದಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳೂ ಇವೆ. ಹಾಗಾಗಿ ಕಾರ್ಮಿಕರ ಸಂಖ್ಯೆಯೂ ಇಲ್ಲಿ ಗಣನೀಯವಾಗಿದೆ. ರಾಜಾಜಿನಗರ ಕ್ಷೇತ್ರ ಪ್ರಮುಖ ಶಿಕ್ಷಣ ಸಂಸ್ಥೆಗಳು, ಪ್ರಮುಖ ಆಸ್ಪತ್ರೆಗಳು, ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳು, ಹೋಟೆಲ್, ರೆಸ್ಟೋರೆಂಟ್, ವಾಣಿಜ್ಯ ತಾಣಗಳಿಗೆ ಹೆಸರಾಗಿದೆ. ಅಲ್ಲದೆ, ನಗರದ ಪ್ರಮುಖ ರಸ್ತೆಯಾದ ಡಾ. ರಾಜ್ ಕುಮಾರ್ ರಸ್ತೆಯೂ ಈ ಕ್ಷೇತ್ರದಲ್ಲಿದೆ.

ಮತದಾರರ ವಿವರ:ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಶಿವನಗರ, ಶ್ರೀರಾಮಮಂದಿರ, ದಯಾನಂದ ನಗರ ಎಂಬ ದೊಡ್ಡ ದೊಡ್ಡ ವಾರ್ಡ್​ಗಳನ್ನು ಹೊಂದಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರಿಗಿಂತ ಪುರುಷ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಕಳೆದ ಬಾರಿಯ ಮತದಾರರ ಪಟ್ಟಿಯ ಅಂಕಿ ಅಂಶದ ಪ್ರಕಾರ 1,07,428 ಪುರುಷ ಮತದಾರರು, 1,03,695 ಮಹಿಳಾ ಮತದಾರರು, 9 ತೃತೀಯ ಲಿಂಗಿಗಳು ಸೇರಿ ಒಟ್ಟು 2,11,132 ಮತದಾರರಿದ್ದಾರೆ. ಲಿಂಗಾಯತ ಸಮುದಾಯದ ಬಾಹುಳ್ಯವಿಳ್ಳ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಎಸ್ಸಿ-ಎಸ್ಟಿ, ಬ್ರಾಹ್ಮಣ, ಅನ್ಯ ಭಾಷಿಕರು, ಮುಸ್ಲಿಂ ಮತದಾರರು ಕೂಡ ಕ್ಷೇತ್ರದಲ್ಲಿದ್ದಾರೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವಿವರ

ಮೂರು ಚುನಾವಣೆಗಳ ಅವಲೋಕನ:2008 ರಲ್ಲಿ 49,655 ಮತ ಪಡೆದಿದ್ದ ಸುರೇಶ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ವಿರುದ್ಧ 14,660 ಮತಗಳ ಅಂತರದಲ್ಲಿ ಗೆಲುವುದು ಸಾಧಿಸಿದ್ದಾರೆ. 2013 ರಲ್ಲಿ 39,291 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಆರ್.ಮಂಜುಳಾ ನಾಯ್ಡು ವಿರುದ್ಧ 14,767 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದು, 2018ರ ಚುನಾವಣೆಯಲ್ಲಿ 56,271 ಮತಗಳನ್ನು ಪಡೆದು ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಜಿ ಪದ್ಮಾವತಿ ವಿರುದ್ಧ 9,453 ಮತಗಳ ಅಂತರದಿಂದ ಗೆದ್ದಿದ್ದಾರೆ. ಮೂರು ಚುನಾವಣೆಯಲ್ಲಿಯೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಮಹಿಳಾ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು ಎನ್ನುವುದು ವಿಶೇಷ. ಇನ್ನು ಮೂರು ಚುನಾವಣೆಯಲ್ಲಿಯೂ ಜೆಡಿಎಸ್ ಗೆಲ್ಲುವ ಪೈಪೊಟಿ ತೋರಿಲ್ಲ. 2008ರಲ್ಲಿ ಮೂರನೇ ಸ್ಥಾನ 2013 ರಲ್ಲಿ ನಾಲ್ಕನೇ ಸ್ಥಾನ, 2018ರಲ್ಲಿ ಮತ್ತೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಮಕ್ಕಳೊಂದಿಗೆ ಸುರೇಶ್​ ಕುಮಾರ್

ಕ್ಷೇತ್ರದ ಚುನಾವಣಾ ಫಲಿತಾಂಶದ ಹಿನ್ನೋಟ:1978 ರಲ್ಲಿ ಜನತಾ ಪಕ್ಷದಿಂದ ಎಂ. ಆನಂದರಾವ್, 1983 ಮತ್ತು 1985 ರಲ್ಲಿ ಸಿಪಿಐನಿಂದ ಎಸ್.ಎಂ. ಕೃಷ್ಣ, 1989 ರಲ್ಲಿ ಕಾಂಗ್ರೆಸ್​ನಿಂದ ಕೆ. ಲಕ್ಕಣ್ಣ, 1994, 1999 ರಲ್ಲಿ ಬಿಜೆಪಿಯಿಂದ ಸುರೇಶ್ ಕುಮಾರ್, 2004 ರಲ್ಲಿ ಕಾಂಗ್ರೆಸ್​ನಿಂದ ನೆ.ಲ ನರೇಂದ್ರಬಾಬು, 2008, 2013, 2018 ರಲ್ಲಿ ಬಿಜೆಪಿಯಿಂದ ಸುರೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಈವರೆಗೂ ನಡೆದಿರುವ ಒಟ್ಟು 10 ಚುನಾವಣೆಗಳಲ್ಲಿ ಒಮ್ಮೆ ಜನತಾ ಪಕ್ಷ, ಎರಡು ಬಾರಿ ಸಿಪಿಐ, ಎರಡು ಬಾರಿ ಕಾಂಗ್ರೆಸ್ ಗೆದ್ದಿದ್ದರೆ ಐದು ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ. 1994 ರಿಂದ 2018ರವರೆಗೂ ನಡೆದಿರುವ ಆರು ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆದ್ದಿದ್ದು, ಈಗ ಆ ವ್ಯಕ್ತಿಯೂ ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿದ್ದಾರೆ.

ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರ ಬಿಜೆಪಿ ವಿಭಜನೆಗೊಂಡ ಕೆಜೆಪಿ ಸ್ಥಾಪನೆ ನಡುವೆಯೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ ಕ್ಷೇತ್ರವಾಗಿದೆ. ಸುರೇಶ್ ಕುಮಾರ್ ವಿರುದ್ಧ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದರೂ ಜನತೆ ಸುರೇಶ್ ಕುಮಾರ್ ಕೈಬಿಟ್ಟಿರಲಿಲ್ಲ. ಕಮಲಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದರು. ಮೊದಲ ಬಾರಿ ಬಿಜೆಪಿ ಸರ್ಕಾರ ರಚನೆಯಾದ ವೇಳೆ ಯಡಿಯೂರಪ್ಪ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು. 2019 ರಲ್ಲಿ ರಚನೆಯಾದ ಬಿಜೆಪಿ ಸರ್ಕಾರದಲ್ಲಿಯೂ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದು, ಯಡಿಯೂರಪ್ಪ ರಾಜೀನಾಮೆ ನಂತರ ಸುರೇಶ್ ಕುಮಾರ್ ಕೂಡ ಸಂಪುಟದಿಂದ ಹೊರಗುಳಿದಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:ಈವರೆಗೂ ಏಳು ಬಾರಿ ಸ್ಪರ್ಧಿಸಿರುವ ಸುರೇಶ್ ಕುಮಾರ್ ಐದು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಮಾತ್ರ ಸೋತಿದ್ದಾರೆ. ಈ ಬಾರಿಯೂ ಬಿಜೆಪಿಯಿಂದ ಸುರೇಶ್ ಕುಮಾರ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಚಿವ ಸ್ಥಾನ ಕಳೆದುಕೊಂಡ ನಂತರ ಮನೆಯಲ್ಲಿ ಕೂರದೆ ಕ್ಷೇತ್ರದ ತುಂಬಾ ಸಂಚರಿಸುತ್ತಿದ್ದಾರೆ. ಮನೆ ಮನೆಗೂ ತಲುಪಿ ಜನರ ಮನ ಗೆಲ್ಲುವ ಕೆಸರತ್ತು ನಡೆಸುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಸೋಷಿಯಲ್ ಮೀಡಿಯಾ ಮೂಲಕವೇ ಜನರಿಗೆ ಸಿಗುತ್ತಿದ್ದ ಸುರೇಶ್ ಕುಮಾರ್ ಈಗ ಖುದ್ದು ಜನರ ಬಳಿಗೆ ತೆರಳುತ್ತಿದ್ದಾರೆ. ಇವರ ಹಿರಿಯ ಕಾರ್ಯಕರ್ತ ಎಸ್.ರಘುನಾಥ್, ಮಾಜಿ ಕಾರ್ಪೊರೇಟರ್ ರಂಗಣ್ಣ, ಮಂಜುನಾಥ್ ಆಕಾಂಕ್ಷಿಗಳಾಗಿದ್ದಾರೆ. ಹೊಸಬರಿಗೆ ಟಿಕೆಟ್ ಎನ್ನುವ ನಿರ್ಧಾರವಾದಲ್ಲಿ ಸುರೇಶ್ ಕುಮಾರ್​ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಸಂಘ ನಿಷ್ಠೆ ಹೊಂದಿರುವ ಸರಳ ಸಜ್ಜನಿಕೆ ರಾಜಕಾರಣಿಯಾಗಿರುವ ಸುರೇಶ್ ಕುಮಾರ್​ಗೆ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗುತ್ತಿದೆ.

ಕಾಂಗ್ರೆಸ್​ನಲ್ಲೂ ಉದ್ದದ ಪಟ್ಟಿ: ಕಾಂಗ್ರೆಸ್​ನಲ್ಲೂ ಕ್ಷೇತ್ರದ ಟಿಕೆಟ್​ಗಾಗಿ ತೀವ್ರ ಪೈಪೋಟಿ ಇದೆ. ಆದರೆ, ಮಹಿಳೆಯರ ನಡುವೆಯೇ ಟಿಕೆಟ್​ಗಾಗಿ ಪೈಪೋಟಿ ನಡೆದಿರುವುದು ವಿಶೇಷ. ಮಾಜಿ ಮೇಯರ್ ಪದ್ಮಾವತಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ ತೀವ್ರ ಪೈಪೊಟಿ ನಡೆಸಿದ್ದಾರೆ. ಇವರ ಜೊತೆ ಬೆಂಗಳೂರು ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಘುವೀರಗೌಡ ಕೂಡ ಆಕಾಂಕ್ಷಿಯಾಗಿದ್ದಾರೆ. ಇದು ಸಾಲದು ಎನ್ನುವಂತೆ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಎಂಎಲ್ಸಿ ಪುಟ್ಟಣ್ಣ ಕೂಡ ಕಾಂಗ್ರೆಸ್​ನಿಂದ ರಾಜಾಜಿನಗರ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಪುಟ್ಟಣ್ಣಗೆ ಟಿಕೆಟ್ ಎನ್ನಲಾಗುತ್ತಿದೆ. ಒಂದು ವೇಳೆ ಮಹಿಳೆಗೆ ಟಿಕೆಟ್ ನೀಡಬೇಕು ಎನ್ನುವ ನಿರ್ಧಾರವಾದಲ್ಲಿ ಭವ್ಯಾ ನರಸಿಂಹಮೂರ್ತಿಗೆ ಟಿಕೆಟ್ ಖಚಿತ ಎನ್ನಲಾಗಿದೆ.

ಜೆಡಿಎಸ್​ಗಿಲ್ಲ ವರಿ: ಇನ್ನು ಜೆಡಿಎಸ್ ಈಗಾಗಲೇ ಅಭ್ಯರ್ಥಿ ಹೆಸರು ಪ್ರಕಟಿಸಿದ್ದು, ಗಂಗಾಧರಮೂರ್ತಿಗೆ ಬಿಫಾರಂ ಘೋಷಿಸಿದೆ. ಹಾಗಾಗಿ ರಾಜಾಜಿನಗರ ಕ್ಷೇತ್ರದಲ್ಲಿ ಜೆಡಿಎಸ್ ಆಕಾಂಕ್ಷಿಗಳ ಸಮಸ್ಯೆ ಇಲ್ಲ.

ಕ್ಷೇತ್ರದ ಸಮಸ್ಯೆಗಳು:ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲ್ಸೇತುವೆ ಪೂರ್ಣವಾಗದೆ. ಸಂಚಾರ ದಟ್ಟಣೆಗೆ ಕಾರಣವಾಗಿರುವುದು ಪ್ರಮುಖ ನ್ಯೂನತೆಯಾಗಿದೆ. ಲುಲು ಮಾಲ್​ನಿಂದಾಗಿ ಉದ್ಭವಿಸಿರುವ ಸಮಸ್ಯೆಯೂ ಶಾಸಕರಿಗೆ ಜನ ಹಿಡಿಶಾಪ ಹಾಕುವಂತೆ ಮಾಡಿದೆ. ಪ್ರಕಾಶ್ ನಗರ, ಶಿವನಗರದಲ್ಲಿನ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಯಾಗಿಲ್ಲ. ಬಡ, ಮಧ್ಯಮರ್ಗದ ಜನರಿರುವ ಕಡೆ ಗ್ರಂಥಾಲಯ, ಈಜುಕೊಳ, ಉದ್ಯಾನವನಗಳು, ಆಟದ ಮೈದಾನ ಇಲ್ಲ ಎನ್ನುವ ಆರೋಪಗಳಿವೆ. ಆದರೂ ದೀನ್​ದಯಾಳ್ ಡಯಾಲಿಸಿದ್ ಕೇಂದ್ರದ ಅಭಿವೃದ್ಧಿ, ವಾಜಪೇಯಿ ಒಳಾಂಗಣ ಕ್ರೀಡಾಂಗಣ, ಆಡಿಟೋರಿಯಂ, ಗಾಂಧಿ ಶಾಲೆ ನಿರ್ಮಾಣಕ್ಕೆ ಜನತೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಲ್ಲಿ ಮತ್ತೊಮ್ಮೆ ಕಮಲ ಅರಳುತ್ತಾ? ಪ್ರತಿ ವರ್ಷವೂ ಮತಗಳಿಕೆ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ಕಮಾಲ್ ಮಾಡುತ್ತಾ? ಅಥವಾ ದಳಪತಿಗಳ ಕೋಟೆ ನಿರ್ಮಾಣವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಕಾಂಗ್ರೆಸ್ ಭದ್ರಕೋಟೆ ಬೇಧಿಸುವ ಬಿಜೆಪಿ ಕನಸು ನನಸಾಗುತ್ತಾ? ಕೈ ಅಭ್ಯರ್ಥಿ ಕುತೂಹಲ!

ABOUT THE AUTHOR

...view details