ಬೆಂಗಳೂರು: ನಗರದಲ್ಲಿ ತುಂತುರು ಮಳೆ ಸುರಿಯುತ್ತಿದೆ. ನಾಳೆ ಮತ್ತು ನಾಡಿದ್ದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ನಗರದಲ್ಲಿ ಕನಿಷ್ಠ ತಾಪಮಾನ 17 ರಿಂದ 19 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ಉಷ್ಣಾಂಶ 23 ರಿಂದ 25 ಡಿಗ್ರಿ ನಿರೀಕ್ಷೆ ಇದೆ. ಹಾಗಾಗಿ, ಚಳಿಯ ವಾತಾವರಣ ಮುಂದುವರೆಯುತ್ತದೆ. ಮುಂಜಾನೆ ವೇಳೆ ಮಂಜು ಬೀಳುವ ಸಾಧ್ಯತೆ ಇದೆ ಎಂದು ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ಒದಗಿಸಿದರು.
ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ನಿನ್ನೆ ದಕ್ಷಿಣ ಒಳನಾಡಿನ ಕೆಲವು ಕಡೆಗಳನ್ನು ಮಾತ್ರ ಮಳೆಯಾಗಿದೆ. ಉತ್ತರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 11.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಧಾರವಾಡದಲ್ಲಿ 13.5 ಡಿಗ್ರಿ, ಬೆಳಗಾವಿಯಲ್ಲಿ 15.4 ಡಿಗ್ರಿ, ಹಾವೇರಿ ಹಾಗೂ ಕೊಪ್ಪಳದಲ್ಲಿ 15 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.
ಏರ್ ಸರ್ಕ್ಯುಲೇಶನ್ ಈಗ ಮನ್ನಾರ್ ಕೊಲ್ಲಿಯಲ್ಲಿದ್ದು 5.8 ಕಿ.ಮೀ ಎತ್ತರದಲ್ಲಿದೆ. ಇನ್ನೊಂದು ಸರ್ಕ್ಯುಲೇಶನ್ ಬಂಗಾಳ ಉಪಸಾಗರದ ಆಗ್ನೇಯ ಭಾಗದಲ್ಲಿ ಭೂಮಧ್ಯೆ ರೇಖೆಯ ಹತ್ತಿರ ಅಂಡಮಾನ್ ಸಮುದ್ರ ಭಾಗದಲ್ಲಿದ್ದು ಅದೇ ಎತ್ತರದಲ್ಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನಲ್ಲಿ ಇಂದು ಹಾಗೂ ಡಿ.10 ರಂದು ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಡಿ.7, 8, 9 ರಂದು ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಪಾಟೀಲ್ ವಿವರಿಸಿದರು.
ಓದಿ: ಬುರೆವಿ ಚಂಡಮಾರುತ: ಕರ್ನಾಟಕದಲ್ಲೂ ಮಳೆ ಸಂಭವ
ಕರಾವಳಿಯಲ್ಲಿ ಇಂದು ಒಣಹವೆ ಮುಂದುವರೆದಿದೆ. ನಾಳೆಯಿಂದ ಡಿ.10ರವರೆಗೆ ಅಲ್ಲಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಡಿ.9 ರಂದು ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿನಿಂದ 8ರವರೆಗೆ ಒಣ ಹವೆ ಮುಂದುವರೆಯಲಿದೆ ಎಂದು ಪಾಟೀಲ್ ಹೇಳಿದರು.