ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆಯಿದೆ ಹಾಗೂ ಬಿಬಿಎಂಪಿ, BWSSB ಮತ್ತು ಬಿಡಿಎ ನಡುವೆ ಇರುವ ಸಮನ್ವಯ ಕೊರತೆಯಿಂದ ಮಳೆ ಅನಾಹುತ ಸಂಭವಿಸುತ್ತಿದೆ. ಸಮಸ್ಯೆ ಬಗೆಹರಿಯಬೇಕಾದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡು ಬಿಟ್ಟಿದಾರೆ. ನಮ್ಮ ಕಾಲದಲ್ಲಿ ನಾವು ತೆರವು ಮಾಡಿದ್ದೆವು. ಈಗ ಅದು ಆಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸಿಎಂ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಂಜೆ ಸಿಟಿ ರೌಂಡ್ಸ್ ನಡೆಸಿದರು. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಬ್ಯಾಟರಾಯನಪುರ, ಶಿವಾಜಿನಗರ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ರಾಜಕೀಯ ಇಚ್ಚಾಶಕ್ತಿ ಬೇಕು. ಆದರೆ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆಯಿದೆ. ನಗರದ ಬಿಬಿಎಂಪಿ, BWSSB, ಬಿಡಿಎ ನಡುವೆ ಸಮನ್ವಯ ಕೊರತೆಯಿದೆ ಎಂದು ಕಿಡಿ ಕಾರಿದರು.
ನಗರದ ಸಮಸ್ಯೆಗಳು ಈಗ ದುಪ್ಪಟ್ಟಾಗಿವೆ: ಬೇಸಿಗೆ ಕಾಲದಲ್ಲಿ ಮಾಡಬೇಕಾದ ಕೆಲಸ ಮಳೆಗಾಲದಲ್ಲಿ ಮಾಡ್ತಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ರಾಜಕಾಲುವೆ ಒತ್ತುವರಿ ಜೊತೆಗೆ ರಾಜಕಾಲುವೆ ಸ್ವಚ್ಛ ಮಾಡದೇ ಇರುವುದು ನೀರು ನುಗ್ಗಲು ಕಾರಣವಾಗಿದೆ.
ಬಿಜೆಪಿ ಸರ್ಕಾರ ಸರ್ವವ್ಯಾಪಿ, ಸರ್ವಸ್ಪರ್ಶಿ, ಅಭಿವೃದ್ಧಿ ನಿರಂತರ ಅನ್ನೋ ಒಳ್ಳೆಯ ಪದ ಬಳಕೆ ಬಿಟ್ಟು ಕೆಲಸ ಮಾಡಲಿ. ಬೆಂಗಳೂರು ಅಭಿವೃದ್ಧಿ ಖಾತೆ ಸಿಎಂ ಬಳಿಯಿದೆ. ಅವರೇ ಈ ಕೆಲಸ ಮಾಡಬೇಕು. ನಾನು ಇದ್ದಾಗ ಪ್ರತ್ಯೇಕವಾಗಿ ಬೇರೆಯವರಿಗೆ ನೀಡಿದ್ದೆ. ಈಗ ಬಿಜೆಪಿ ಸರ್ಕಾರದಲ್ಲಿ ಸಿಎಂ ಬಳಿ ಉಳಿಸಿಕೊಂಡು ನಗರದ ಸಮಸ್ಯೆಗಳು ದುಪ್ಪಟ್ಟು ಆಗಿವೆ ಎಂದು ಆರೋಪಿಸಿದರು.