ಕರ್ನಾಟಕ

karnataka

ETV Bharat / state

ಜಲಾಶಯಗಳು ಬಣ, ಬಣ... ಮಳೆ ಕೊರತೆಯಿಂದ ರಾಜ್ಯಕ್ಕೆ ಕಾದಿದೆಯಾ ಜಲಕ್ಷಾಮ?! - undefined

ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೆರೆ, ಕುಂಟೆ, ಜಲಾಶಯಗಳು ಒಣಗಿವೆ. ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ.85 ರಷ್ಟು ಕುಸಿತವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಕಷ್ಟವಾಗಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಮಳೆ ಕೊರತೆ

By

Published : Jun 30, 2019, 7:07 PM IST

ಬೆಂಗಳೂರು: ಜೂನ್ ಮುಗಿದರೂ ರಾಜ್ಯದ ಹಲವು ಕಡೆ ಇನ್ನೂ ಮಳೆ ಬಂದಿಲ್ಲ. ಬಿತ್ತನೆ ಕಾರ್ಯ ಹಲವು ಕಡೆ ಆಗಿಲ್ಲ. ಜಲಾಶಯಗಳಿಗೆ ನೀರು ಬಂದಿಲ್ಲ. ಮತ್ತೊಮ್ಮೆ ಭೀಕರ ಬರಗಾಲ ಎದುರಿಸಲು ರಾಜ್ಯ ಸಜ್ಜಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ.

ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೆರೆ, ಕುಂಟೆಗಳು, ಜಲಾಶಯಗಳು ಒಣಗಿವೆ. ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಇದೆ. ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ.31ರಷ್ಟು ಕಡಿಮೆ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಶೇ.47, ಮಲೆನಾಡು ಪ್ರದೇಶದಲ್ಲಿ ಶೇ.49ರಷ್ಟು ನೀರಿನ ಕೊರತೆಯಿದೆ. ಕಳೆದ ವರ್ಷ 145 ಟಿಎಂಸಿ ನೀರು ಹರಿದಿದ್ದು, ಈ ಬಾರಿ ಜೂನ್​​ನಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಜಲಾಶಯಗಳಿಗೆ ಹರಿದು ಬಂದಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ ಬಾರಿ 54 ಟಿಎಂಸಿ ನೀರು, ಈ ಬಾರಿ 2.35 ಟಿಎಂಸಿ ನೀರು ಸಂಗ್ರಹವಾಗಿದೆ. ಜುಲೈನಲ್ಲಿ ವಾಡಿಕೆಯಷ್ಟು ಮಳೆ ಬಂದರೂ ಜಲಾಶಯಗಳು ತುಂಬುವುದು ಕಷ್ಟವಾಗಲಿದೆ.

ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ.85 ರಷ್ಟು ಕುಸಿತವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಕಷ್ಟವಾಗಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ವಾಡಿಕೆಗಿಂತ ಈ ಬಾರಿ ಮಾನ್ಸೂನ್ ತಡವಾಗಿದೆ. ಕೆಲವೇ ದಿನಗಳಲ್ಲಿ ಆಷಾಢ ಮಾಸ ಆರಂಭವಾಗುತ್ತದೆ. ರಾಜ್ಯದಲ್ಲಿ ಮಳೆ ಸುಳಿವಿಲ್ಲದೆ ಜನರು ತತ್ತರಿಸುವಂತಾಗಿದೆ. ಜೂನ್ ಆರಂಭವಾಗುತ್ತಿದ್ದಂತೆ ಮಲೆನಾಡಿನ ಭಾಗದಲ್ಲಿ ಸುರಿಯುತ್ತಿದ್ದ ಮಳೆ ಈ ಬಾರಿ ಕಂಡುಬರಲಿಲ್ಲ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಶೂನ್ಯ ಸಂಗ್ರಹಣೆಗೆ ಇಳಿದಿದೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುವುದು ಕಷ್ಟ ಎಂದು ರಾಜ್ಯ ಸರ್ಕಾರವೂ ಈಗಾಗಲೇ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಜುಲೈ ಮೊದಲ ವಾರದಿಂದ ಮೋಡ ಬಿತ್ತನೆ ಮಾಡಲಾಗುವುದು ಎಂದು ಸಚಿವರು ಈ ಹಿಂದೆಯೇ ಹೇಳಿದ್ದರು. ಪ್ರತಿವರ್ಷ ಮೇ ಕೊನೆಯಲ್ಲೇ ಶುರುವಾಗುವ ಮಳೆಗಾಲ ಜೂನ್ ತಿಂಗಳಲ್ಲಿ ಚುರುಕುಗೊಳ್ಳುತ್ತಿತ್ತು. ಈ ಬಾರಿ ಜೂನ್ ಮುಗಿಯುತ್ತಿದ್ದರೂ ಮಳೆ ಚುರುಕುಗೊಂಡಿಲ್ಲ. ಕಳೆದ ವಾರದಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕಾಫಿನಾಡಿನಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದೆ ಜನರು ಕಂಗಲಾಗಿದ್ದಾರೆ.

ಮಾನ್ಸೂನ್ ಆರಂಭವಾಗುತ್ತಿದ್ದಂತೆ ಮೊದಲು ತುಂಬುತ್ತಿದ್ದುದು ಹೆಚ್.ಡಿ ಕೋಟೆಯಲ್ಲಿರುವ ಕಬಿನಿ ಜಲಾಶಯ.ಕೊಡಗು, ಕೇರಳದಲ್ಲಿ ಮಳೆಯಾದರೆ ಅತಿ ಶೀಘ್ರವಾಗಿ ತುಂಬುತ್ತಿದ್ದ ಈ ಜಲಾಶಯ ಈ ಬಾರಿ ತೀವ್ರತರನಾದ ನೀರಿನ ಅಭಾವ ಎದುರಿಸುತ್ತಿದೆ. ಈ ಭಾಗದ ರೈತರು ಹಾಗೂ ಜನಸಾಮಾನ್ಯರು ಸಹ ಆತಂಕಕ್ಕೀಡಾಗಿದ್ದಾರೆ. ಸಮರ್ಪಕ ಮಳೆಯಿಲ್ಲದ ಕಾರಣ ಕಬಿನಿ ಜಲಾಶಯದ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಜಲಾಶಯದ ನೀರು ಇಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ಕಾರಣ ಏನೆಂಬ ವಸ್ತುಸ್ಥಿತಿ ಅರಿಯಲು ಕೇಂದ್ರ ಜಲ ತಂಡ ಆಗಮಿಸಿದ್ದು, ಡ್ಯಾಂನಿಂದ ಹೊರಹೋಗುವ ನೀರಿನ ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನೀರಿನ ಮಟ್ಟ ತೀವ್ರ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲಾಗುತ್ತಿದೆ ಎನ್ನುವ ಆರೋಪ ಸಹ ಹೇಳಿ ಬಂದಿದೆ. ಕಬಿನಿ ತುಂಬದಿದ್ದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಅಲ್ಲದೇ, ಜಲ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಹೊರ ಹರಿವಿನ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಅಲ್ಲದೆ, ನೀರಿನ ಹರಿವಿನ ಮಾಹಿತಿ ಕುರಿತು ಶೀಘ್ರವೇ ಡಿಜಿಟಲೈಸ್ ಮಾಡುವಂತೆಯೂ ಕೇಂದ್ರ ತಂಡ ಸೂಚಿಸಿದೆ.

ಜೂನ್ 15 ರಿಂದ ರಾಜ್ಯಕ್ಕೆ ಮಾನ್ಸೂನ್ ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಆ ನಿರೀಕ್ಷೆಯೂ ಸುಳ್ಳಾಯಿತು. ಇದೀಗ ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದತ್ತ ಮಾನ್ಸೂನ್ ಬರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆಯೇ ನೀಡಿದೆ. ಮೊದಲು ಕೇರಳಕ್ಕೆ ತಂಪೆರೆಯುವ ಮಳೆ ನಂತರ ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೇ ಉತ್ತರ ಭಾರತದ ಕಡೆಗೆ ಹೋಗಲಿದೆ. ಈ ಬಾರಿ ಮಳೆಗಾಲ ಶುರುವಾಗುವುದು ತಡವಾದರೂ ಜುಲೈ ನಂತರ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details