ಬೆಂಗಳೂರು:ಮಳೆ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಇಲ್ಲಿನ ರೈನ್ ಬೋ ಲೇಔಟ್ ಸೇರಿದಂತೆ ಹಲವು ಬಡಾವಣೆಗಳು ಯಥಾಸ್ಥಿತಿಗೆ ತಲುಪುತ್ತಿದೆ. ಜನ ಜೀವನ ಸಹಜ ಸ್ಥಿತಿಯ ಕಡೆ ಹೊರಳುತ್ತಿದೆ.
ನಿನ್ನೆಯಿಂದ ಮಳೆ ಇಲ್ಲದ ಕಾರಣ ಜನರ ಬದುಕು ಯಥಾಸ್ಥಿತಿಗೆ ಬಂದಿದೆ. ಅದರಲ್ಲೂ ರೈನ್ ಬೋ ಲೇಔಟ್ನ ರೇನ್ ಬೋ ಡ್ರೈವ್ನಲ್ಲಿ ನೀರಿನ ಮಟ್ಟ ತಗ್ಗಿದೆ. ಇಲ್ಲಿ ಬರೋಬ್ಬರಿ 460 ವಿಲ್ಲಾಗಳಿದ್ದು ಕೆಲ ವಿಲ್ಲಾ ಮಾಲೀಕರು ವಾಪಸ್ ಮನೆಯತ್ತ ಮುಖ ಮಾಡಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲೇಔಟ್ ಮುಂಭಾಗದಲ್ಲಿ ತುಂಬಿರುವ ಮಳೆನೀರನ್ನು ಪಂಪ್ ಮೂಲಕ ಹೊರ ತೆಗೆಯುವ ಪ್ರಯತ್ನ ಮಾಡಲಾಗಿದೆ. ಮತ್ತೊಂದೆಡೆ ಒಳಭಾಗದಲ್ಲಿರುವ ಕೆನರಾ ಬ್ಯಾಂಕ್ ಇಂದು ಕೂಡಾ ಬಂದ್ ಆಗಿದ್ದು, ದೊಡ್ಡಸಂದ್ರದ ಶಾಖೆಗೆ ಇಲ್ಲಿನ ಕೆಲಸ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಂದಿನಂತೆ ಪ್ರಾರಂಭವಾದ ವ್ಯಾಪಾರ: ಬೆಳ್ಳಂದೂರು ಔಟರ್ ರಿಂಗ್ ರೋಡ್ನಲ್ಲಿ ಮಳೆ ನೀರು ತಗ್ಗಿದ್ದು, ಎಂದಿನಂತೆ ವ್ಯಾಪಾರಸ್ಥರು ವ್ಯಾಪಾರ ಶುರುಮಾಡಿದ್ದಾರೆ. ಕಳೆದ ಐದು ದಿನಗಳಿಂದ ಅಕ್ಕಪಕ್ಕದಲ್ಲಿದ್ದ ಮಳಿಗೆಗಳನ್ನು ಬಂದ್ ಮಾಡಲಾಗಿತ್ತು ಎಂದಿದ್ದಾರೆ.
ಸರಿಯಾದ ಮಾರ್ಗವಿಲ್ಲದೆ ಸಮಸ್ಯೆ: ಇಂದು ಅಂಗಡಿಗಳನ್ನು ತೆರೆದು ಸ್ವಚ್ಛ ಮಾಡುತ್ತಿದ್ದೇವೆ. ಹಲವು ವರ್ಷಗಳಿಂದ ಈ ಔಟರ್ ರಿಂಗ್ ರೋಡ್ನಲ್ಲಿ ವ್ಯಾಪಾರ ಮಾಡುತಿದ್ದೇವೆ. ಆದರೆ, ಇಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಅಂಗಡಿಗಳಿಗೆ ನೀರು ನುಗ್ಗಿರಲಿಲ್ಲ. ಅತಿ ಹೆಚ್ಚು ಮಳೆಗೆ ನೀರು ಹೋಗುವುದಕ್ಕೆ ಸರಿಯಾದ ಮಾರ್ಗವಿಲ್ಲದೇ ಈ ರೀತಿ ಸಮಸ್ಯೆಯಾಗಿತ್ತು ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಪಾಲಿಕೆಗೆ ಮತ್ತೊಂದು ಸವಾಲು:ನಗರದ ಬಹುತೇಕ ರಸ್ತೆಗಳಲ್ಲಿ ಮತ್ತೆ ಗುಂಡಿ ಸಮಸ್ಯೆಗಳು ಉಲ್ಬಣಗೊಂಡಿವೆ. ಕಳೆದ ಹತ್ತು ದಿನಗಳಿಂದ ಸುರಿದ ಮಳೆಯೇ ಇದಕ್ಕೆ ಕಾರಣವಾಗಿದೆ. ಮಳೆ ಮೊದಲೇ ಹದಗೆಟ್ಟಿದ್ದ ರಸ್ತೆಗಳನ್ನು ಸಾವಿನ ಗುಂಡಿ ಮಾಡಿದೆ. ಬೆಂಗಳೂರು ಪೂರ್ವ ವಲಯದ ಪ್ರವಾಹಕ್ಕೆ ರಸ್ತೆಗಳು ಕೊಚ್ಚಿಹೋಗಿದೆ. ಬೆಂಗಳೂರಿನ ಸುಮಾರು 16,000 ಕಿ. ಮೀ ಉದ್ದದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ವಾರದಲ್ಲೇ 9 ಸಾವಿರಕ್ಕೂ ಹೆಚ್ಚು ಗುಂಡಿ ಸೃಷ್ಟಿಯಾಗಿದೆ. ಬಹುತೇಕ ಕಡೆಗಳಲ್ಲಿ ಮಳೆಯೂ ಸುರಿಯುತ್ತಿರುವುದರಿಂದ ಗುಂಡಿಗಳೆಲ್ಲಾ ನೀರು ತುಂಬಿ ಹೊಂಡಗಳಾಗಿವೆ. ಕಳೆದೊಂದು ವಾರ ಸುರಿದ ಮಳೆಯಿಂದಾಗಿ 16 ಸಾವಿರ ಕಿ.ಮೀ ಉದ್ದದ ರಸ್ತೆಯಲ್ಲಿ ಶೇ. 60 ಭಾಗದ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕೆಲ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಹೀಗಾಗಿ, ಈ ರಸ್ತೆ ದುರಸ್ತಿಗಾಗಿ ಬಿಬಿಎಂಪಿಗೆ ಕನಿಷ್ಠ 30 ಕೋಟಿ ರೂ. ಅವಶ್ಯಕತೆಯಿದೆ ಎನ್ನಲಾಗುತ್ತಿದೆ.
ಓದಿ:ಬೆಂಗಳೂರಿನಲ್ಲಿ ಪ್ರವಾಹ: ಮಳೆ ಪೀಡಿತ ಬಡಾವಣೆಗಳಲ್ಲೀಗ ಸಾಂಕ್ರಾಮಿಕ ರೋಗದ ಭೀತಿ