ಕರ್ನಾಟಕ

karnataka

ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ: ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಆಕ್ರೋಶ

By

Published : May 18, 2022, 5:22 PM IST

ರಾತ್ರಿ ಮಾಡಿದ್ದ ಅಡುಗೆ ತಿನ್ನಲು ಆಗಲಿಲ್ಲ. ಅಡುಗೆ ಎಲ್ಲ ನೀರು ಪಾಲಾಯ್ತು, ಸರ್ಕಾರದ ಜನಪ್ರತಿನಿಧಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾವು ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

Rain Effects in bengaluru
ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಹಲವೆಡೆ 12 ಸೆಂಟಿಮೀಟರ್​​ಗಿಂತಲೂ ಅಧಿಕ ಮಳೆಯಾಗಿದ್ದರಿಂದ ವಾಹನ ಸವಾರರು, ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅನೇಕ ಕಡೆಗಳಲ್ಲಿ ಮನೆಯೊಳಗೆ ಬಂದ ನೀರನ್ನು ಹೊರ ಹಾಕುತ್ತಾ ಜನ ಹೈರಣಾಗಿದ್ದಾರೆ.

ನಗರದ ಹೊರಮಾವು ವಾರ್ಡ್​ನ ಸಾಯಿ ಬಡಾವಣೆ ಮತ್ತು ವಡ್ಡರಪಾಳ್ಯದಲ್ಲಿ ಮೂರು ಅಡಿಗೂ ಹೆಚ್ಚು ನೀರು ಮಳೆಯ ತುಂಬಿಕೊಂಡಿದ್ದು, ಸುಮಾರು 300ಕ್ಕೂ ಹೆಚ್ಚು ಮನೆಗಳಿಗೆ ನೀರು ತುಂಬಿಕೊಂಡಿದೆ. ಬಡಾವಣೆ ನಿವಾಸಿಗಳು ಪರದಾಡುವಂತ ಪರಿಸ್ಥಿತಿ ಆಗಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ತಗ್ಗು ಪ್ರದೇಶಗಳ ನೆಲಮಹಡಿಯಲ್ಲಿರುವ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮೊದಲ ಮಹಡಿಯ ನಿವಾಸಿಗಳು ಹಾಗೂ ಎರಡನೇ ಮಹಡಿಗೆ ತೆರಳಿ ಆಶ್ರಯ ಪಡೆಯುತ್ತಿದ್ದಾರೆ. ಮನೆಯಲ್ಲಿ ನಿಂತ ನೀರನ್ನು ಇನ್ನೂ ಹೊರಹಾಕಲಾಗದೇ ಮತ್ತು ಅಡುಗೆ ಮಾಡಲು ಆಗುತ್ತಿಲ್ಲ. ಸ್ಥಳೀಯರಿಗೆ ಟ್ರ್ಯಾಕ್ಟರ್ ಮೂಲಕ ತೆರಳಿ‌ ಆಹಾರ ಹಂಚಿಕೆ ಮಾಡ ಮಾಡಲಾಯಿತು. ಮತ್ತೆ ಕೆಲವರು ಜನ ಸಂಕಷ್ಟ ನೋಡಿ ನೀರು, ಬ್ರೆಡ್ ವಿತರಿಸಿದರು.

ಒಂದೇ ಮಳೆಗೆ ತತ್ತರಿಸಿದ ಬೆಂಗಳೂರು ಜನ

ಬಡಾವಣೆ ನಿವಾಸಿಗಳು ಆಕ್ರೋಶ: ಎಲ್ಲ ರಸ್ತೆಯಲ್ಲಿ ಸೊಂಟದುದ್ದಕ್ಕೆ ನಿಂತಿರುವ ನೀರು ಬುಧವಾರ ಮಧ್ಯಾಹ್ನವಾದರೂ ಕಡಿಮೆಯಾಗಲಿಲ್ಲ. ಸಾಯಿಬಾಬ ದೇವಸ್ಥಾನ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡಿದೆ. ಪ್ರತಿವರ್ಷ ಮಳೆಗಾಲ ಸಮಯದಲ್ಲಿ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತದೆ. ಆದರೆ. ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಲ್ಲ ಎಂದು ಬಡಾವಣೆ ನಿವಾಸಿಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆನೀರು ತುಂಬಿದಾಗ‌ ಮಾತ್ರ ಓಡಿ ಬರುತ್ತಾರೆ ಅಷ್ಟೇ, ಯಾವುದೇ ಪ್ರಯೋಜನ ಇಲ್ಲ. ಪ್ರತಿ ವರ್ಷ ಹಬ್ಬದಂತೆ ಇದನ್ನು ಕೂಡ ನಾವು ಆಚರಣೆ ಮಾಡಬೇಕು. ಮಳೆ ನೀರು ಬರುವ ಹಬ್ಬದ ರೀತಿ ನಾವು ಪ್ರತಿವರ್ಷ ಆಚರಣೆ ಮಾಡಬೇಕು. ರಾತ್ರಿ ಮಾಡಿದ್ದ ಅಡುಗೆ ತಿನ್ನಲು ಆಗಲಿಲ್ಲ. ಅಡುಗೆ ಎಲ್ಲ ನೀರು ಪಾಲಾಯ್ತು, ಸರ್ಕಾರದ ಜನಪ್ರತಿನಿಧಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾವು ಟ್ಯಾಕ್ಸ್ ಕಟ್ಟೋದು ಈ ರೀತಿ ಕಷ್ಟ ಪಡೋದಕ್ಕಾ?. ಪೆಟ್ರೋಲ್, ಡೀಸೆಲ್, ದಿನಸಿ ಬೆಲೆ ಮೊದಲೇ ಜಾಸ್ತಿ ಆಗಿದೆ. ಈಗ ಹಾಳಾಗಿರುವ ಗೃಹಪಯೋಗಿ ವಸ್ತು ತೆಗೆದುಕೊಳ್ಳಲು ಮತ್ತೆ ಖರ್ಚು ಮಾಡಬೇಕು ಎಂದು ಸರ್ಕಾರದ ಮೇಲೆ ಸಿಟ್ಟಿಗೆದ್ದರು.

ಸ್ಥಳಕ್ಕೆ ಸಚಿವ ಬೈರತಿ ಬಸವರಾಜ್ ಭೇಟಿ: ವಡ್ಡರಪಾಳ್ಯ ಮತ್ತು ಶ್ರೀಸಾಯಿ ಬಡಾವಣೆಯಲ್ಲಿ ನೀರು ನುಗ್ಗಿ ಉಂಟಾದ ಅವಾಂತರದ ಬಗ್ಗೆ ತಿಳಿದ ಸಚಿವ ಬೈರತಿ ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಸ್ಯೆಗೆ ತುತ್ತಾದ ಜನರ ಸಮಸ್ಯೆಗಳನ್ನ ಆಲಿಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಮಳೆ ನೀರಿನಿಂದಾಗಿ ಈ ಭಾಗದಲ್ಲಿ ಹೆಚ್ಚು ಮಳೆ ಬಂದಿದ್ದರಿಂದ ಸಮಸ್ಯೆ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ಕೆಲಸ ಆರಂಭಿಸಿ ಫೆಬ್ರವರಿ ಅಂತ್ಯಕ್ಕೆ ಶಾಶ್ವತ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಮುಖ್ಯಮಂತ್ರಿಗಳು 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಈ‌ ಬಡಾವಣೆಯಲ್ಲಿ ಯಾವುದೇ ಸಮಸ್ಯೆ ಆಗಿದ್ದರೆ ಹಾಗೂ ಮನೆಗಳಿಗೆ ಹಾನಿಯಾಗಿದ್ದರೆ ತಕ್ಷಣ ಅವರಿಗೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತೆ ಎಂದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಇಂದು, ನಾಳೆ ಮಳೆ; ಆರೆಂಜ್‌ ಅಲರ್ಟ್‌ - ಸಿಎಂ ಸಿಟಿ ರೌಂಡ್ಸ್‌, ಪರಿಹಾರ ಘೋಷಣೆ

ABOUT THE AUTHOR

...view details