ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಮತ್ತು 1978ರ ಮೊದಲಿನಿಂದ ಸಾಗುವಳಿ ಮಾಡುತ್ತಿರುವ ಸಣ್ಣ ಹಿಡುವಳಿದಾರರ ಸಮಸ್ಯೆ ಪರಿಹರಿಸಲು ಜಂಟಿ ಸಮೀಕ್ಷೆ ನಡೆಸುವ ಭರವಸೆಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ.
ಇಂದು ತಮ್ಮನ್ನು ಭೇಟಿ ಮಾಡಿದ್ದ ಚಿಕ್ಕಮಗಳೂರು ಭಾಗದ ಶಾಸಕರಾದ ಟಿ.ಡಿ. ರಾಜೇಗೌಡ, ನಯನ ಮೋಟಮ್ಮ, ನಾಯಕರಾದ ಬಿ.ಎಲ್. ಶಂಕರ್, ಎಚ್.ಎಂ. ವಿಶ್ವನಾಥ್ ಅವರನ್ನೊಳಗೊಂಡ ನಿಯೋಗದ ಅಹವಾಲು ಆಲಿಸಿದ ಸಚಿವರು, ''ಅರಣ್ಯ ಭೂಮಿಯಲ್ಲಿ 5ರಿಂದ 6 ದಶಕಗಳಿಂದ ಕೃಷಿ ಮಾಡುತ್ತಿರುವ ಬಡ ರೈತರ ಸಮಸ್ಯೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಅಗತ್ಯವಿದೆ'' ಎಂದು ಹೇಳಿದರು.
ರೈಲ್ವೆ ಬ್ಯಾರಿಕೇಡ್: ಸಕಲೇಶಪುರ ಮತ್ತು ಚಿಕ್ಕಮಗಳೂರಿನ ಅರಣ್ಯದಂಚಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿ 140ಕ್ಕೂ ಹೆಚ್ಚು ಆನೆಗಳಿವೆ. ಆನೆಗಳ ಹಿಂಡು ತೋಟಕ್ಕೆ ಬಂದರೆ ಬೆಳೆ ನಾಶವಾಗುತ್ತದೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿಯಿದೆ ಎಂದು ಬಿ.ಎಲ್. ಶಂಕರ್, ವಿಶ್ವನಾಥ್ ಮತ್ತು ಮೋಟಮ್ಮ ವಿವರಿಸಿದರು. ಈ ಸಮಸ್ಯೆಗೆ ರೈಲ್ವೆ ಬ್ಯಾರಿಕೇಡ್ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಬಜೆಟ್ನಲ್ಲಿ ಹೆಚ್ಚಿನ ಅನುದಾನಕ್ಕೆ ಕೋರಲಾಗುವುದು ಎಂದರು.
ಅರಣ್ಯದೊಳಗೆ ಹಣ್ಣಿನ ಗಿಡಗಳನ್ನು ಬೆಳೆಸಿ, 2 ಕಿಮೀಗೆ ಒಂದರಂತೆ ಕೆರೆ, ಕಟ್ಟೆ ಕಟ್ಟಿಸಿದರೆ ಆನೆಗಳು ನಾಡಿಗೆ ಬರುವುದು ಕಡಿಮೆ ಆಗುತ್ತದೆ ಎಂದು ನಿಯೋಗದ ಸದಸ್ಯರು ಸಲಹೆ ನೀಡಿದರು. ಈ ಸಲಹೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಎಂದು ಹೇಳಿದರು.
ಕಚೇರಿ ಸ್ಥಳಾಂತರಕ್ಕೆ ಮನವಿ:ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿಯ ಕಚೇರಿ ಕಡೂರಿನಲ್ಲಿದ್ದು ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನ ಜನರು ಅಲ್ಲಿಗೆ ಹೋಗಬೇಕಾದ ಸ್ಥಿತಿ ಇದೆ. ವಾಸ್ತವವಾಗಿ ಕಡೂರಿನಲ್ಲಿ ಯಾವುದೇ ಅರಣ್ಯವಿಲ್ಲ. ಹೀಗಾಗಿ ಈ ಕಚೇರಿಯನ್ನು ಮೂಡಿಗೆರೆಗೆ ಅಥವಾ ಸಕಲೇಶಪುರಕ್ಕೆ ವರ್ಗಾಯಿಸುವಂತೆಯೂ ನಿಯೋಗ ಸಚಿವರಿಗೆ ಮನವಿ ಮಾಡಿತು. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ವಹಿಸುವುದು ಎಂದು ಸಚಿವರು ತಿಳಿಸಿದರು.
ಸೌರಬೇಲಿ ಯೋಜನೆ:''ಹಾಸನ, ಚಾಮರಾಜನಗರ, ರಾಮನಗರ, ಕೊಡಗು, ಮೈಸೂರು, ಬನ್ನೇರುಘಟ್ಟ ಪ್ರದೇಶಗಳಲ್ಲಿ ಆನೆಗಳ ಹಾವಳಿ ಇದೆ. ಈ ಪ್ರದೇಶಗಳಲ್ಲಿ ಜೀವಹಾನಿ ತಪ್ಪಿಸಲು ಕ್ರಮವಹಿಸಲು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ್ಯಂತ 641 ಕಿಮೀ ಬ್ಯಾರಿಕೇಡ್ ಮತ್ತು ಸೌರಬೇಲಿ ಹಾಕುವ ಯೋಜನೆ ಇದೆ. ಈ ಪೈಕಿ 360 ಕಿಮೀ ಕಾರ್ಯ ಪೂರ್ಣವಾಗಿದೆ. ರಾಜ್ಯದಲ್ಲಿ 629 ಆನೆಗಳಿದ್ದು, ಸಾವಿನ ಪ್ರಮಾಣ ಬೇರೆ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಜೀವ ಹಾನಿ ತಪ್ಪಿಸಲು ವಿವಿಧ ಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ'' ಎಂದಿದ್ದರು.
ವನ್ಯಮೃಗಗಳ ದಾಳಿಗೆ 51 ಜನರ ಸಾವು: ''2019-20ರ ವರ್ಷದಲ್ಲಿ ವನ್ಯಮೃಗಗಳ ದಾಳಿಯಿಂದ ರಾಜ್ಯದಲ್ಲಿ 50 ಸಾವು ಸಂಭವಿಸಿವೆ. ಅದರಲ್ಲಿ 29 ಸಾವು ಆನೆಗಳಿಂದಲೇ ಆಗಿವೆ. 20-21ರ ಅವಧಿಯಲ್ಲಿ 41 ಜನರು ಮೃತಪಟ್ಟಿದ್ದಾರೆ. 2021-22ರ ಅವಧಿಯಲ್ಲಿ 29 ಹಾಗೂ 2022-23ರ ಅವಧಿಯಲ್ಲಿ 51 ಜನರು ಸಾವನ್ನಪ್ಪಿದ್ದರು. ಅದರಲ್ಲಿ 29 ಆನೆ ದಾಳಿ ಪ್ರಕರಣಗಳು ಜರುಗಿವೆ. ಇತ್ತೀಚೆಗೆ ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರದಲ್ಲಿ ಆನೆ ಕಾರ್ಯಪಡೆ ಕಾರ್ಯಾಚರಣೆ ನಡೆಸುತ್ತಿದೆ'' ಎಂದು ಹೇಳಿದ್ದರು.
ಇದನ್ನೂ ಓದಿ:KRS Dam: ಬರಿದಾಗ್ತಿದೆ ಕೆಆರ್ಎಸ್ ಡ್ಯಾಂ; ಕುಡಿಯುವ ನೀರಿಗೆ ಹಾಹಾಕಾರದ ಮುನ್ಸೂಚನೆಯೇ?