ಬೆಂಗಳೂರು :ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ (ಕೆಪಿಸಿಸಿ) ಹಿಂಭಾಗದಲ್ಲಿರುವ ಕಾಂಗ್ರೆಸ್ ಪಕ್ಷದ ನೂತನ ಕಟ್ಟಡ ಇಂದಿರಾಗಾಂಧಿ ಭವನ ಇಂದು ಉದ್ಘಾಟನೆಯಾಗಲಿದೆ. ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭವನವನ್ನು ಸಂಜೆ 6.45ಕ್ಕೆ ಉದ್ಘಾಟಿಸಲಿದ್ದು, ಅರ್ಧ ಗಂಟೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಯ ದಶಕಗಳ ಸುದೀರ್ಘ ಅವಧಿ ಪಡೆದಿದೆ. 2010ರಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2014 ರಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ವಿಶೇಷ ಅಂದರೆ, 2008 ರಲ್ಲಿ ಆರ್.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಈಗಿರುವ ಕೆಪಿಸಿಸಿ ಕಚೇರಿ ನಿರ್ವಹಣೆಗೆ ಚಿಕ್ಕದಾಗುತ್ತದೆ, ಇದರಿಂದ ಇನ್ನೊಂದು ಕಚೇರಿಯ ಅಗತ್ಯ ಇದೆ ಎಂದು ಪರಿಗಣಿಸಿ ಮತ್ತೊಂದು ಕಚೇರಿ ನಿರ್ಮಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗಿತ್ತು.
2014ರಲ್ಲಿ ಉದ್ದೇಶಿತ ಕಟ್ಟಡಕ್ಕೆ 12 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಆದರೆ ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಲೇ ಸಾಗಿತ್ತು. 2020ರ ಮಾರ್ಚ್ನಲ್ಲಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 6 ರಿಂದ 7 ಕೋಟಿ ರೂ ಹಣ ಬೇಕು ಎಂದು ಹೇಳಲಾಗುತ್ತಿತ್ತು. ಇದನ್ನು ಭರಿಸಲು ಕ್ರಮ ಕೈಗೊಂಡ ಡಿಕೆಶಿ, ಕಾಮಗಾರಿ ಪೂರ್ಣಗೊಳಿಸಿದ್ದರು. ನಂತರ ಒಂದೆರಡು ಕಾರ್ಯಕ್ರಮಗಳೂ ಸಹ ಇಲ್ಲಿ ನೆರವೇರಿದ್ದು, ಇದೀಗ ಅಧಿಕೃತವಾಗಿ ಉದ್ಘಾಟನೆ ಭಾಗ್ಯ ಪಡೆಯುತ್ತಿದೆ.