ಬೆಂಗಳೂರು:ಮೋದಿ ವಿರುದ್ಧ ರಾಜಕೀಯ ಹೋರಾಟ ಮಾಡಲು ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ ಎಂದು ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಮೋದಿ ವಿರುದ್ಧ ಫೈಟ್ ಮಾಡೋದಕ್ಕೆ ರಾಹುಲ್ ಸಮರ್ಥ ವ್ಯಕ್ತಿ: ಕೆ. ಹೆಚ್. ಮುನಿಯಪ್ಪ ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಹುಲ್ ಪ್ರಶ್ನೆಗೆ ಮೋದಿ ಉತ್ತರಿಸೋಕೆ ಆಗ್ತಿಲ್ಲ. ರಾಹುಲ್ ಗಾಂಧಿಯವರೇ ಮುಂದೆ ಬರಬೇಕೆಂದು ಸ್ಪಷ್ಟಪಡಿಸಿದರು. ನಿನ್ನೆ 52 ಮಂದಿ ಸದಸ್ಯರು ಸಿಡಬ್ಲೂಸಿ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಸೋನಿಯಾ ಮುಂದುವರಿಕೆ ಬಗ್ಗೆ ಒಪ್ಪಿಗೆ ನೀಡಿದ್ದೇವೆ. ರಾಹುಲ್ ಗಾಂಧಿಯವರನ್ನು ಬೆಂಬಲಿಸಿದ್ದೇವೆ. ಅವರನ್ನು ಭೇಟಿಯಾಗುವುದಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಪತ್ರ ಬರೆದ 23 ಮಂದಿಗೂ ನಿರ್ಬಂಧವಿರಲಿಲ್ಲ. ಯಾವಾಗ ಬೇಕಾದರೂ ಅವರು ಭೇಟಿ ಮಾಡಬಹುದಿತ್ತು ಎಂದು ತಿಳಿಸಿದರು.
ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಈ ರೀತಿ ಪತ್ರ ಬರೆದದ್ದು ಯಾಕೆ ಅಂತ ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸಿದರು. ಪತ್ರ ಬರೆದವರು ಭಿನ್ನಾಬಿಪ್ರಾಯ ವ್ಯಕ್ತಪಡಿಸಿಲ್ಲ. ಅವರು ಪಕ್ಷ ಸಂಘಟನೆ ಉದ್ದೇಶದಿಂದ ಮಾತ್ರ ಪತ್ರ ಬರೆದಿದ್ದಾರೆ. ಅವರೇನು ಭಿನ್ನಾಬಿಪ್ರಾಯ ಹೊರಹಾಕಿಲ್ಲವೆಂದು ಇದೇ ವೇಳೆ ಸ್ಪಷ್ಪಡಿಸಿದರು.
ಬಿಜೆಪಿಯವರು ಕೇವಲ ಭಾವನೆಗಳ ಮೇಲೆ ಆಡಳಿತ ಮಾಡುತ್ತಿದ್ದಾರೆ. ಬರೀ ಹಿಂದುತ್ವ ಹಿಂದುತ್ವ ಅಂದ್ರೆ ಆಗುತ್ತಾ?. ನಾವುಗಳೆಲ್ಲ ಹಿಂದೂಗಳಲ್ವಾ?. ನಮಗೆಲ್ಲ ದೇವರು, ಧರ್ಮದ ಮೇಲೆ ನಂಬಿಕೆ ಇಲ್ವಾ?. ಕೇವಲ ರಾಜಕಾರಣಕ್ಕಾಗಿ, ಚುನಾವಣೆಗಾಗಿ ಮಾತ್ರ ಧರ್ಮ ದೇವರನ್ನು ತರುವುದು ಸರಿಯಲ್ಲ. ಧರ್ಮದ ಆಧಾರದ ಮೇಲೆ ರಾಜ್ಯಭಾರ ಮಾಡುತ್ತಿರುವುದು ಮಹಾ ಅಪರಾಧ ಎಂದು ಮುನಿಯಪ್ಪ ಕಿಡಿಕಾರಿದರು.