ಬೆಂಗಳೂರು:ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದೆ. ರಾಜ್ಯ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೆಚ್ಚು ಸ್ಥಳೀಯ ಪ್ರಚಾರವನ್ನು ನಡೆಸಲಾಯಿತು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯು ದೇಶಾದ್ಯಂತ 3,570 ಕಿ.ಮೀ. ಕ್ರಮಿಸಿತ್ತು. ಈ ಪಾದಯಾತ್ರೆಯು ವಿಶೇಷವಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಭಾರತ್ ಜೋಡೋ ಯಾತ್ರೆ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ರಾಜ್ಯ ಪ್ರವಾಸ ಮಾಡಿದರು. ಅವರು ಕರ್ನಾಟಕದಲ್ಲಿ 21 ದಿನಗಳನ್ನು ಕಳೆದರು. ಸೆಪ್ಟೆಂಬರ್ 31, 2022ರಿಂದ ಅಕ್ಟೋಬರ್ 19, 2022ರವರೆಗೆ ಏಳು ಜಿಲ್ಲೆಗಳನ್ನು ಒಳಗೊಂಡ 511 ಕಿಲೋಮೀಟರ್ ದೂರವನ್ನು ಪ್ರಯಾಣಿಸಿದರು. ಚಾಮರಾಜನಗರದಿಂದ ಯಾತ್ರೆ ಆರಂಭಿಸಿದ ರಾಹುಲ್, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿದರು. ಈ ಏಳು ಜಿಲ್ಲೆಗಳು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಲ್ಲಿ 51 ಕ್ಷೇತ್ರಗಳನ್ನು ಹೊಂದಿದ್ದು, ಅದರಲ್ಲಿ ಕಾಂಗ್ರೆಸ್ 37 ಸ್ಥಾನಗಳನ್ನು ಗೆದ್ದಿದೆ.
7 ಜಿಲ್ಲೆಗಳ ಒಟ್ಟು ವಿಧಾನಸಭಾ ಕ್ಷೇತ್ರಗಳಿಂದ ಪಕ್ಷಗಳು ಗೆದ್ದರುವ ಸ್ಥಾನಗಳ ವಿವರ:
ಜಿಲ್ಲೆಗಳು | ವಿಧಾನಸಭಾ ಕ್ಷೇತ್ರಗಳು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಇತರೆ |
ಚಾಮರಾಜನಗರ | 4 | 3 | 0 | 1 | 0 |
ಮೈಸೂರು | 11 | 8 | 1 | 2 | 0 |
ಮಂಡ್ಯ | 7 | 5 | 0 | 1 | 1 |
ತುಮಕೂರು | 11 | 7 | 2 | 2 | 0 |
ಚಿತ್ರದುರ್ಗ | 6 | 5 | 1 | 0 | 0 |
ಬಳ್ಳಾರಿ | 5 | 5 | 0 | 0 | 0 |
ರಾಯಚೂರು | 7 | 4 | 2 | 1 | 0 |
ಒಟ್ಟು ಸ್ಥಾನಗಳು | 51 | 37 | 6 | 7 | 1 |
ಏಳು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳನ್ನು ಗಮನಿಸಿ:
ಚಾಮರಾಜನಗರ:ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಹನೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ. ಜೆಡಿಎಸ್ ಗೆದ್ದಿರುವ ಹನೂರು ಬಿಟ್ಟರೆ, ಮೂರೂ ಸೀಟುಗಳನ್ನು ಕಾಂಗ್ರೆಸ್ ಗೆದ್ದಿದೆ. 2018 ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿತ್ತು.
ಮೈಸೂರು:ಈ ಜಿಲ್ಲೆಯಲ್ಲಿ 11 ಸ್ಥಾನಗಳಿದ್ದು, ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದ್ದರೆ, ಎರಡು ಜೆಡಿಎಸ್ ಮತ್ತು ಬಿಜೆಪಿಗೆ ಒಂದು ಸ್ಥಾನ ಜಯಗಳಿಸಿದೆ. ಕೃಷ್ಣರಾಜನಗರ (ಕಾಂಗ್ರೆಸ್), ಹುಣಸೂರು (ಜೆಡಿಎಸ್), ಹೆಗ್ಗಡದೇವನಕೋಟೆ (ಕಾಂಗ್ರೆಸ್ ಉಳಿಸಿಕೊಂಡಿದೆ), ನಂಜನಗೂಡು (ಕಾಂಗ್ರೆಸ್), ಚಾಮುಂಡೇಶ್ವರಿ (ಜೆಡಿಎಸ್ ಉಳಿಸಿಕೊಂಡಿದೆ), ಕೃಷ್ಣರಾಜ (ಬಿಜೆಪಿ ಉಳಿಸಿಕೊಂಡಿದೆ), ಚಾಮರಾಜ (ಬಿಜೆಪಿಯಿಂದ ಕಾಂಗ್ರೆಸ್ ವಶಪಡಿಸಿಕೊಂಡಿದೆ), ನರಸಿಂಹರಾಜ (ಕಾಂಗ್ರೆಸ್ ಉಳಿಸಿಕೊಂಡಿದೆ), ವರುಣಾ (ಕಾಂಗ್ರೆಸ್ ಉಳಿಸಿಕೊಂಡಿದೆ) ಮತ್ತು ಟಿ.ನರಸೀಪುರ (ಜೆಡಿಎಸ್‌ನಿಂದ ಕಾಂಗ್ರೆಸ್ ವಶಪಡಿಸಿಕೊಂಡಿದೆ). ಪಿರಿಯಾಪಟ್ಟಣ (ಕಾಂಗ್ರೆಸ್ ಉಳಿಸಿಕೊಂಡಿದೆ).