ಬೆಂಗಳೂರು:ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತೀವ್ರವಾಗಿ ಗಾಯಗೊಂಡಿರುವ ಆನೆ ಮರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ನಾಗರಹೊಳೆ ಮೀಸಲು ಪ್ರದೇಶಕ್ಕೆ ಸಫಾರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಗಾಯಗೊಂಡ ಆನೆ ಮರಿಯೊಂದು ತನ್ನ ತಾಯಿ ಆನೆ ಜೊತೆ ಇರುವುದನ್ನು ಅವರು ನೋಡಿದ್ದಾರೆ. ಈ ಬಗ್ಗೆ ಚಿಕಿತ್ಸೆಗೆ ಒತ್ತಾಯಿಸಿ ಸಿಎಂಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
'ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೆಲಕಾಲ ಭೇಟಿ ನೀಡಿದ್ದೆವು. ಅಲ್ಲಿ ಗಾಯಗೊಂಡಿರುವ ಆನೆ ಮರಿಯೊಂದು ತನ್ನ ತಾಯಿಯೊಂದಿಗೆ ಇರುವ ಕರುಣಾಜನಕ ದೃಶ್ಯ ಕಂಡಿದ್ದೇವೆ. ಪುಟ್ಟ ಮರಿಯ ಬಾಲ ಮತ್ತು ಸೊಂಡಿಲು ಭಾಗದಲ್ಲಿ ತೀವ್ರತರದ ಗಾಯಗಳಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದೆ' ಎಂದು ರಾಹುಲ್ ತಿಳಿಸಿದ್ದಾರೆ.
ಆನೆ ಮರಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಆದ್ದರಿಂದ, ನಾನು ರಾಜಕೀಯ ಗಡಿಗಳನ್ನು ಮೀರಿ ಮಧ್ಯಸ್ಥಿಕೆ ವಹಿಸಿ ಪುಟ್ಟ ಮರಿ ಉಳಿಸಲು ಮನವಿ ಮಾಡುತ್ತಿದ್ದೇನೆ. ಸರಿಯಾದ ಚಿಕಿತ್ಸೆ ನೀಡಿದರೆ ಮರಿ ಬದುಕುಳಿಯುತ್ತದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ನೀವು ಸಮಯೋಚಿತ ಸಹಾಯ ನೀಡುತ್ತೀರಿ ಎಂದು ಭಾವಿಸಿದ್ದೇನೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ, ಆನೆ ಮರಿಯು ತನ್ನ ತಾಯಿಯೊಂದಿಗೆ ಇರುವ ಫೋಟೋವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 'ತಾಯಿಯ ಪ್ರೀತಿ. ಬದುಕಿಗಾಗಿ ಹೋರಾಡುತ್ತಿರುವ ಚಿಕ್ಕ ಮರಿಯೊಂದಿಗೆ ತಾಯಿ ಆನೆಯನ್ನು ಕಂಡು ತುಂಬಾ ದುಃಖವಾಯಿತು' ಎಂದಿದ್ದಾರೆ.
ಆಯುಧಪೂಜೆ ಮತ್ತು ವಿಜಯದಶಮಿ (ಮಂಗಳವಾರ ಮತ್ತು ಬುಧವಾರ) ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಯಿಂದ ವಿರಾಮ ಪಡೆದಿದ್ದಾರೆ. ಯಾತ್ರೆಯಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಚ್.ಡಿ. ಕೋಟೆಯ ಕಬಿನಿ ಹಿನ್ನೀರಿನ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಗುರುವಾರ ಬೆಳಗ್ಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೆಳ್ಳಾಲೆಯಲ್ಲಿ ಪಾದಯಾತ್ರೆ ಪುನರಾರಂಭವಾಗಲಿದ್ದು, ಇಬ್ಬರೂ ನಾಯಕರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಬದನವಾಳುವಿನಲ್ಲಿ ರಾಹುಲ್ ಗಾಂಧಿ ಸಹ ಭೋಜನ.. ಎರಡು ಸಮುದಾಯಗಳ ಮನಸ್ಸು ಜೋಡಿಸುವ ಕೆಲಸ