ಕನ್ನಡ ಚಿತ್ರರಂಗದ ದೊಡ್ಮನೆ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಐದು ತಿಂಗಳು ಕಳೆಯುತ್ತಿವೆ. ಆದರೆ, ಈ ರಾಜರತ್ನನ ನೆನಪು ಮಾತ್ರ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದೆ. ಪ್ರತಿ ದಿನ ಕಂಠೀರವ ಸ್ಟುಡಿಯೋದಲ್ಲಿರೋ ಪವರ್ಸ್ಟಾರ್ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು, ಪೂಜೆ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ಈ ಯುವರತ್ನನ ಕುಟುಂಬಕ್ಕೆ ಸಾಂತ್ವನ ಹೇಳಲು ಭಾರತೀಯ ಚಿತ್ರರಂಗದ ಸ್ಟಾರ್ಗಳು, ನಿರ್ದೇಶಕರು, ರಾಜಕೀಯ ನಾಯಕರು ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.
ಕೆಲ ದಿನಗಳ ಹಿಂದೆ ಬಾಲಿವುಡ್ ನಟ ಸಂಜಯ್ ದತ್ ಭೇಟಿ ನೀಡಿ ರಾಜ್ ಕುಟುಂಬದವರಿಗೆ ಸಮಾಧಾನದ ಮಾತುಗಳನ್ನ ಹೇಳಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದಾಶಿವ ನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ದಿ. ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಕಾರ್ಯಕ್ರಮದ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ತುಮಕೂರಿನ ಸಿದ್ಧಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ರಾಹುಲ್ ಗಾಂಧಿ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಪ್ಪು ಫೋಟೋಗೆ ನಮನ ಸಲ್ಲಿಸಿದ್ದಾರೆ.
ದಿ. ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಈ ವೇಳೆ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಧೈರ್ಯದ ಮಾತುಗಳನ್ನ ಹೇಳಿದ್ದಾರೆ. ಇದರ ಜೊತೆಗೆ ರಾಘವೇಂದ್ರ ರಾಜ್ಕುಮಾರ್ಗೂ ರಾಹುಲ್ ಗಾಂಧಿ ಸಮಾಧಾನದ ಮಾತುಗಳನ್ನ ಹೇಳಿದ್ದಾರೆ. ರಾಹುಲ್ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.