ಕರ್ನಾಟಕ

karnataka

By

Published : Apr 1, 2023, 8:14 AM IST

ETV Bharat / state

ರಾಹುಲ್ ಗಾಂಧಿ ಕೋಲಾರ ಸಮಾವೇಶ ಏ. 9ಕ್ಕೆ ಮುಂದೂಡಿಕೆ: ಕೈ ನಾಯಕರಿಂದ ಪೂರ್ವಭಾವಿ ಸಭೆ

ಕಾಂಗ್ರೆಸ್ ಪಕ್ಷವು ಕೋಲಾರದಿಂದ ರಾಜ್ಯ ಚುನಾವಣಾ ರಣಕಹಳೆ ಮೊಳಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.5ಕ್ಕೆ ಬೃಹತ್ ಸಮಾವೇಶಕ್ಕೆ ಉದ್ದೇಶಿಸಲಾಗಿತ್ತು. ಇದೀಗ ಆ ಸಮಾವೇಶವನ್ನ ಏಪ್ರಿಲ್ 9 ರಂದು ನಡೆಸಲು ನಿರ್ಧರಿಸಲಾಗಿದೆ.

meeting
ಪೂರ್ವಭಾವಿ ಸಭೆ

ಬೆಂಗಳೂರು: ಏಪ್ರಿಲ್ 5 ರಂದು ನಡೆಯಬೇಕಾಗಿದ್ದ ರಾಹುಲ್ ಗಾಂಧಿ ಕೋಲಾರ ಸಮಾವೇಶವನ್ನು ಏ. 9 ಕ್ಕೆ ಮುಂದೂಡಲಾಗಿದೆ. ಈ‌ ಮುಂಚೆ ಕೋಲಾರದಲ್ಲಿ ಸತ್ಯಮೇವ ಜಯತೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂದು ಮಾಡಿದ ವಿವಾದಿತ ಭಾಷಣದಿಂದಾಗಿ ರಾಹುಲ್ ಗಾಂಧಿ ತಮ್ಮ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದೀಗ ಅದೇ ಜಿಲ್ಲೆಯಿಂದಲೇ ರಾಜ್ಯ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಮುಂದಾಗಿದೆ.

ಕೋಲಾರದಲ್ಲಿ ನಡೆಯುವ ಈ ಸತ್ಯಮೇವ ಜಯತೇ ಕಾರ್ಯಕ್ರಮದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ, ಮಾಜಿ ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿಯಡಿ ಬೆಂಗಳೂರು ಅಸುರಕ್ಷಿತ ನಗರ- ಸುರ್ಜೇವಾಲಾ: ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದು ನಿರ್ಭಯ ಎಂದು ಪ್ರಶ್ನಿಸಿರುವ ಅವರು, ಬೆಂಗಳೂರು ಬಿಜೆಪಿ ಆಡಳಿತದಡಿ ಅಸುರಕ್ಷಿತ ನಗರವಾಗಿದೆ ಎಂದು ಆರೋಪಿಸಿದ್ದಾರೆ.

"ಇದು ಪರಾಮರ್ಶಿಸುವ ಸಮಯವಾಗಿದೆ. ನೀವು ನಿಮ್ಮ ಮನೆಯಿಂದ ಸುರಕ್ಷಿತವಾಗಿ ಹೊರ ಹೋಗಲು ಸಾಧ್ಯವಿಲ್ಲವಾದರೆ, ಪಾರ್ಕ್​ಗೆ ಸುರಕ್ಷಿತವಾಗಿ ಹೋಗಲು ಸಾಧ್ಯವಾಗಿಲ್ಲವಾದ್ರೆ, ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ಆಗದಿದ್ದರೆ, ಲೈಂಗಿಕ ದಾಳಿ ಮತ್ತು ಗ್ಯಾಂಗ್ ರೇಪ್ ನಿಮ್ಮನ್ನು ಭಯಭೀತರಾಗಿಸಿದ್ದರೆ, ನೀವು ಬಿಜೆಪಿಯನ್ನು ಶಪಿಸುವುದಿಲ್ಲವೇ?" ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಇದನ್ನೂ ಓದಿ:ಬಿಎಸ್​ವೈ ನಿವಾಸದ ಮೇಲಿನ ದಾಳಿ ಖಂಡನೀಯ : ರಣದೀಪ್​ ಸಿಂಗ್​ ಸುರ್ಜೇವಾಲಾ

ಬೊಮ್ಮಾಯಿ ಸರ್ಕಾರ 40% ಕಮಿಷನ್ ಹೊಂದಿದೆ. ಭ್ರಷ್ಟಾಚಾರದ ಸರ್ಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರಾಜ್ಯದ ಜನ ಉತ್ತಮ ಸರ್ಕಾರ ತರ್ತಾರೆ. ಪ್ರತಿ ತಿಂಗಳು ಗೃಹ ಜ್ಯೋತಿ ಕಾರ್ಯಕ್ರಮ, ನಿರುದ್ಯೋಗಿಗಳಿಗೆ 3,000 ರೂ‌. ಪ್ರತಿ ತಿಂಗಳು ಘೋಷಣೆ, ಪ್ರತಿ ಮಹಿಳೆಯರಿಗೆ 2,000 ರೂ. ಘೋಷಿಸಿದ್ದೇವೆ. ಬ್ರಾಂಡ್ ಬೆಂಗಳೂರನ್ನ ನಾವು ಮಾಡ್ತೇವೆ. ರಾಜ್ಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುತ್ತೇವೆ ಎಂದಿದ್ದಾರೆ.

ಹರಕೆಯ ಕುರಿ ಮಾಡಲಾಗುತ್ತಿದೆ- ಕಾಂಗ್ರೆಸ್​ ಟ್ವೀಟ್​ : ಯಡಿಯೂರಪ್ಪ ಪುತ್ರ ವಿಜಯೇಂದ್ರರನ್ನು ವರುಣಾ ಕ್ಷೇತ್ರದಲ್ಲಿ ನಿಲ್ಲಿಸಿ ಹರಕೆಯ ಕುರಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಾಲೆಳೆದಿದೆ. ಯಡಿಯೂರಪ್ಪ & ಸನ್ಸ್ ಕಂಪನಿಯನ್ನು ಮುಗಿಸಲು ಬಿಜೆಪಿ ಹೀಗೆಲ್ಲಾ ತಂತ್ರ ಹೂಡುತ್ತಿದೆ . ಅದರ ಮುಂದುವರೆದ ಭಾಗವಾಗಿ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಅವರನ್ನು ತಳ್ಳಿ "ಹರಕೆಯ ಕುರಿ"ಯಾಗಿಸುವ ಪ್ರಯತ್ನ ನಡೆದಿದೆ. ಸಂತೋಷ ಕೂಟದ ತಂತ್ರಗಾರಿಕೆಯನ್ನು ಬಿಎಸ್ ವೈ ಅವರು ಅರ್ಥ ಮಾಡಿಕೊಂಡು ಎಚ್ಚೆತ್ತರೆ ಪುತ್ರರ ಭವಿಷ್ಯ ಉಳಿಯಬಹುದು‌ ಎಂದು ಎಚ್ಚರಿಕೆ ನೀಡಿದೆ.

ನಮ್ಮ ಮನೆಯೇ ನಿಮ್ಮ ಮನೆ ಅಭಿಯಾನ : ರಾಹುಲ್ ಗಾಂಧಿಯಿಂದ ಸರ್ಕಾರಿ ಬಂಗಲೆ ಕಿತ್ತುಕೊಂಡ ಹಿನ್ನೆಲೆ ಕಾಂಗ್ರೆಸ್ ಶಾಸಕರಿಂದ ವಿನೂತನ ಅಭಿಯಾನ ಆರಂಭವಾಗಿದೆ. 'ನಮ್ಮ ಮನೆಯೇ ನಿಮ್ಮ ಮನೆ' ಅಭಿಯಾನವನ್ನು ಕಾಂಗ್ರೆಸ್ ಶಾಸಕರು ಆರಂಭಿಸಿದ್ದಾರೆ. ರಾಹುಲ್ ಗಾಂಧಿಗೆ ತಮ್ಮ ತಮ್ಮ ನಿವಾಸಕ್ಕೆ ಬರುವಂತೆ ಕಾಂಗ್ರೆಸ್​ ಶಾಸಕರು ಆಹ್ವಾನ‌ ನೀಡುತ್ತಿದ್ದಾರೆ.

ABOUT THE AUTHOR

...view details