ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಕೈ ನಾಯಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಎರಡು ದಿನಗಳ ಭೇಟಿ ಪ್ರಯುಕ್ತ ಇಂದು ಆಗಮಿಸುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದು, ಚುನಾವಣಾ ಗೆಲುವಿಗೆ ತಂತ್ರಗಾರಿಕೆ ರೂಪಿಸಲಿದ್ದಾರೆ.
ಈಗಾಗಲೇ ಒಂದೆರಡು ವಾರಗಳಿಂದ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. 100ಕ್ಕೂ ಹೆಚ್ಚು ಅಭ್ಯರ್ಥಿಗಳು ಬಿ ಫಾರಂ ಸ್ವೀಕರಿಸಿದ್ದು, ನಾಮಪತ್ರ ಸಲ್ಲಿಕೆ ಸಹ ಆರಂಭವಾಗಿದೆ. ಮೇ 10 ರಂದು ನಡೆಯುವ ಮತದಾನದ ಬಗ್ಗೆ ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ಪಕ್ಷದ ಪ್ರಚಾರ ರಣಕಹಳೆ ಮೊಳಗಿಸಲಿದ್ದಾರೆ.
ಕಾಂಗ್ರೆಸ್ ನಾಯಕರ ಜತೆ ಸಮಾಲೋಚನೆ: ಕೋಲಾರ ಹಾಗೂ ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ರಾಹುಲ್ ಗಾಂಧಿ ಬಯಲು ಸೀಮೆ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಚುನಾವಣೆಗೆ ಹೊಸ ಉತ್ಸಾಹ ತುಂಬಲಿದ್ದಾರೆ. ಎರಡು ದಿನದ ಪ್ರವಾಸದಲ್ಲಿ ಅವರು ವಿವಿಧ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಮಾಲೋಚಿಸಲಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭ ಯಾವ ರೀತಿಯ ನಡೆಯನ್ನ ಹೊಂದಬೇಕು ಮತ್ತು ಯಾರಿಗೂ ಅವಹೇಳನ ಮಾಡದ ರೀತಿ ಕಾಂಗ್ರೆಸ್ನ ಜನಪ್ರಿಯತೆಯನ್ನು ಮಾತ್ರ ಪ್ರಚಾರ ಮಾಡುವ ಕಾರ್ಯ ಮಾಡಬೇಕು ಎಂಬ ಸಂದೇಶವನ್ನು ರವಾನೆ ಮಾಡಲಿದ್ದಾರೆ. ಈ ಹಿಂದೆಯೂ ಬಿಜೆಪಿ ವರಿಷ್ಠರು ಅಥವಾ ನಾಯಕರ ವಿರುದ್ಧ ನೀಡಿದ ಹೇಳಿಕೆಗಳು ಕಾಂಗ್ರೆಸ್ ಗೆಲುವಿಗೆ ವ್ಯತಿರಿಕ್ತವಾಗಿ ಪರಿಣಮಿಸಿದ್ದು, ಈ ಬಾರಿ ಅಂತಹ ಘಟನೆ ಮರುಕಳಿಸದಿರುವಂತೆ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಸೂಚಿಸಲಿದ್ದಾರೆ. ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಕೂಡಲಿರುವ ಅವರು ರಾಜ್ಯ ಕಾಂಗ್ರೆಸ್ ನಾಯಕರನ್ನು ಅಲ್ಲಿಗೆ ಕರೆಸಿಕೊಂಡು ಸಮಾಲೋಚಿಸಲಿದ್ದಾರೆ.
ಪ್ರವಾಸದ ವಿವರ:ಇಂದು ಬೆಳಗ್ಗೆ 9.30ಕ್ಕೆ ದೆದಲಿಯಿಂದ ಪ್ರಯಾಣ ಬೆಳೆಸುವ ರಾಹುಲ್ ಗಾಂಧಿ ಬೆಳಗ್ಗೆ 11-50ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಅವರನ್ನ ಬರಮಾಡಿಕೊಳ್ಳಲಿದ್ದು ಅಲ್ಲಿಂದ ನೇರವಾಗಿ ಕೋಲಾರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 12.25ಕ್ಕೆ ಕೋಲಾರಕ್ಕೆ ಆಗಮಿಸಿ, ಜಿಲ್ಲೆಯ ಹೊರವಲಯದ ಟಮಕ ಬಳಿ ನಡೆಯುವ ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.