ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧತೆ, ತಂತ್ರಗಾರಿಕೆ ಮತ್ತು ಪ್ರಚಾರ ಕುರಿತು ದೆಹಲಿಯಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ರಾಷ್ಟ್ರೀಯ ನಾಯಕರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಮುಂಬರುವ ದಿನಗಳಲ್ಲಿ ನಡೆಯುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ, 2023ರ ವಿಧಾನಸಭೆ ಚುನಾವಣೆಗಳಿಗೆ ಸರ್ವರೀತಿಯಲ್ಲಿ ಸಜ್ಜಾಗುವಂತೆ ರಾಜ್ಯ ನಾಯಕರಿಗೆ ಕರೆ ನೀಡಲಾಗಿದೆ.
ಸಭೆಯಲ್ಲಿ ಪಕ್ಷದ ಪ್ರಮುಖರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಗುರಿ ನೀಡಲಾಗಿದೆ. ಈ ಎಲ್ಲ ಗುರಿ ತಲುಪಲು ಈಗಿನಿಂದಲೇ ಸಿದ್ಧತೆ ಆರಂಭಿಸಿ ಎಂದು ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕಿಂತ ಒಂದು ಸ್ಥಾನ ಸಹ ಕಡಿಮೆ ಬಾರದಂತೆ ನೋಡಿಕೊಳ್ಳಿ ಎಂದು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ರಾಹುಲ್ ಗಾಂಧಿ ತಿಳಿಸಿದ್ದರು. ಇದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಮತ್ತು ಮುಂಬರುವ ದಿನಗಳಲ್ಲಿ ಈ ಗೆಲುವೇ ರಾಜ್ಯದಲ್ಲಿ ಕಾಂಗ್ರೆಸ್ನ ಪ್ರಾಬಲ್ಯ ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.