ಬೆಂಗಳೂರು: ಭಾರತವನ್ನು ಛಿದ್ರಗೊಳಿಸಲು ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಹೊಸ ಅಸ್ತ್ರವೇ ಒಬಿಸಿ ಹೆಸರಿನ ಜಾತಿ ರಾಜಕಾರಣ. ಇದುವರೆಗೆ ಎಲ್ಲದರಲ್ಲೂ ಸೋತಿರುವ ರಾಹುಲ್ ಗಾಂಧಿಯೆದುರು ಈಗ ಇರುವುದು ಹಿಂದೂ ಸಮಾಜವನ್ನು ಒಡೆಯುವ ಗುರಿ. ಹಾಗಾಗಿ ಒಬಿಸಿ ವರ್ಗಗಳ ಮೇಲೆ ದಿಢೀರ್ ಧೃತರಾಷ್ಟ್ರ ಪ್ರೀತಿ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಒಬಿಸಿ ವರ್ಗಗಳಿಗೆ ಒಳಿತು ಮಾಡುವುದು ಬದಿಗಿರಲಿ, ಒಳಿತಾಗುವುದನ್ನೇ ತಡೆಹಿಡಿದ ಮಹಾಮಹಿಮರು ಕಾಂಗ್ರೆಸ್ ಪಕ್ಷದಲ್ಲಿ ಆಗಿ ಹೋಗಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ರಚನೆಗೆ 1957ರಲ್ಲೇ ಕಾಕಾ ಕಾಲೇಕರ್ ಸಮಿತಿ ಶಿಫಾರಸು ಮಾಡಿದ್ದರೂ ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ರಾಜೀವ್ ಗಾಂಧಿಯವರವರೆಗೂ ಯಾವೊಬ್ಬ ಕಾಂಗ್ರೆಸ್ ಪ್ರಧಾನಿಯೂ ಅದಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಇತಿಹಾಸವನ್ನು ಪಂಡಿತೋತ್ತಮ ರಾಹುಲ್ ಗಾಂಧಿಯವರು ಅರಿಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವ್ಯಂಗ್ಯವಾಡಿದೆ.
ಸಾಂವಿಧಾನಿಕವಾಗಿ ಮೀಸಲಾತಿಯ ಹಕ್ಕು ಇರುವವರ ಹೊರತಾಗಿ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕೆಂದ ಮಂಡಲ್ ಆಯೋಗದ ವರದಿಯನ್ನು ಕಸದ ಬುಟ್ಟಿಗೆಸೆಯಲು ಲಾಯಕ್ ಎಂದು 1990ರಲ್ಲಿ ಗಟ್ಟಿಯಾಗಿ ಧ್ವನಿಯೇರಿಸಿ ಸದನದಲ್ಲಿ ಕೂಗಿದ್ದವರು ರಾಜೀವ್ ಗಾಂಧಿಯವರು. ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡಿದರೆ ತನ್ನ ತುಷ್ಟೀಕರಣ ರಾಜಕಾರಣಕ್ಕೆ ಹೊಡೆತ ಬೀಳುತ್ತದೆ ಎಂಬುದು ರಾಜೀವ್ ಗಾಂಧಿಯವರಿಗೆ ಅಂದು ಅತೀವವಾಗಿ ಇದ್ದ ಚಿಂತೆ. ಆದರೆ ಇತಿಹಾಸದ ಲವಲೇಶ ಜ್ಞಾನವೂ ಇಲ್ಲದ ರಾಹುಲ್ ಗಾಂಧಿ, ಈಗ ತಂದೆ ವಿರೋಧಿಸಿದ್ದ ಒಬಿಸಿ ಮೀಸಲಾತಿಯನ್ನೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಅಸ್ತ್ರವನ್ನಾಗಿ ಬಳಸಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತೆ ಮಂಡಲ್ ಆಯೋಗವು 1983ರಲ್ಲೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೆ ಅದರಲ್ಲಿ ಮುಸಲ್ಮಾನರನ್ನು ಸೇರಿಸಿಲ್ಲ ಎಂಬ ಕಾರಣಕ್ಕೆ ಮಂಡಲ್ ವರದಿ ಜಾರಿ ಮಾಡಲು ಕಾಂಗ್ರೆಸ್ ಮೀನಮೇಷ ಎಣಿಸಿತ್ತು. ಕೊನೆಗೂ ವರದಿ ಜಾರಿಗೆ ಬಂದದ್ದು 1989ರಲ್ಲಿ ಬಿಜೆಪಿ ಬೆಂಬಲಿತ ಜನತಾ ಸರ್ಕಾರದಿಂದಲೇ. ವರದಿಯನ್ನು ಅನುಷ್ಠಾನ ಮಾಡುವಲ್ಲಿ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಾ ಬಂದ ಕಾಂಗ್ರೆಸ್ ಕೊನೆಗೂ ವರದಿ ಜಾರಿ ಮಾಡಿದ್ದು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೇ ಹೊರತು ಸ್ವಇಚ್ಛೆಯಿಂದಲ್ಲ ಎಂದಿದೆ.
2018ರಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಸ್ಥಾಪನೆಗೆ ಕೇಂದ್ರದ ಪ್ರಧಾನಿ ಮೋದಿ ಅವರ ಸರ್ಕಾರ ಮುಂದಾದಾಗ ಅದನ್ನು ವಿರೋಧಿಸಿದ್ದು ಕಾಂಗ್ರೆಸ್ ಎಂಬ ಇತಿಹಾಸದ ಕನಿಷ್ಠ ಸತ್ಯ ಅದೇ ಪಕ್ಷದ ಮುಖಂಡ ರಾಹುಲ್ ಗಾಂಧಿಯವರಿಗೆ ತಿಳಿದಿರಬೇಕಿತ್ತು. ಆದರೆ, ಅತ್ತ ತುಷ್ಟೀಕರಣ ಮಾಡುತ್ತಾ ಇತ್ತ ಜಾತಿ ರಾಜಕಾರಣದ ಹುಳಿ ಹಿಂಡಬೇಕು ಎಂದು ನಿಮ್ಮ ಪಕ್ಷ ಈಗ ತೀರ್ಮಾನಿಸಿದೆ. ಹಿಂದುಳಿದ ವರ್ಗಗಳ ಉದ್ಧಾರಕನಂತೆ ಫೋಸ್ ಕೊಡುವ ಸಿದ್ದರಾಮಯ್ಯರವರ ಹಕೀಕತ್ತು ಏನು ಎಂಬುದನ್ನು ಬಿ.ಕೆ.ಹರಿಪ್ರಸಾದ್ ಅರಳು ಹುರಿದಂತೆ ನುಡಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.
ಹಿಂದುಳಿದವರ ಅಭಿವೃದ್ಧಿಗೆ ಅಲ್ಪಸಂಖ್ಯಾತರನ್ನೂ ಸೇರಿಸಿ ಹಿಂದುಳಿದವರು ಅಲ್ಪ-ಸ್ವಲ್ಪವೂ ಉದ್ಧಾರವಾಗಬಾರದು ಎಂದು ಕಪಟ ಸೂತ್ರ ಹೆಣೆದದ್ದಕ್ಕೇ ಸಿದ್ದರಾಮಯ್ಯರವರು ಕಾಂಗ್ರೆಸ್‌ಗೆ ಸೇರಿಸಿಕೊಂಡ ವಿಚಾರವನ್ನು ರಾಹುಲ್ ಗಾಂಧಿ ಮರೆಯಬಾರದು. ಕಾಂಗ್ರೆಸ್‌ನ ಕುಯುಕ್ತಿಯ ತರುವಾಯವೂ ಕರ್ನಾಟಕದಲ್ಲಿ ಒಬಿಸಿ ಸಮುದಾಯಗಳು ಶೈಕ್ಷಣಿಕವಾಗಿ ಪ್ರಗತಿ ದಾಖಲಿಸುತ್ತಿದ್ದಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಯಿತು. ಹಾಗಾಗಿ ಅದನ್ನು ಅಲ್ಪಸಂಖ್ಯಾತರ ವಲಯಕ್ಕೆ ಹೈಜಾಕ್ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಮುಂದಾಳು ಬೇಕಾಗಿತ್ತು. ಆಗ ಹಿಂದುಳಿದವರನ್ನು ಮುಂದಿಟ್ಟು ಅಲ್ಪಸಂಖ್ಯಾತರ ಓಲೈಕೆ ಮಾಡಲು ಸಿದ್ದರಾಮಯ್ಯರವರು ಆಯ್ಕೆ ಮಾಡಿಕೊಂಡಿದ್ದೇ ಅಹಿಂದಾ ಎಂಬ ಮುಖವಾಡ. ಕಾಂಗ್ರೆಸ್‌ನ ಆ ಬೃಹತ್ ಅಜೆಂಡಾವನ್ನು ಆರಂಭಿಸಿರುವ ಶ್ರೀಯುತರಿಗೆ ಈಗ ಸನಾತನ ಹಿಂದೂ ಧರ್ಮವನ್ನೇ ನಿರ್ನಾಮ ಮಾಡಲು ಶಪಥ ಮಾಡಿರುವ ಉದಯನಿಧಿ ಸ್ಟಾಲಿನ್ ಬೆಂಬಲವಿದೆ. ಇಂಥ ದೇಶ ಒಡೆಯುವ ಮತ್ತು ದ್ವೇಷ ಕಾರುವ ವಿಶಿಷ್ಟ ರಾಜಕಾರಣದ ತುತ್ತತುದಿಯನ್ನು ರಾಹುಲ್ ಗಾಂಧಿ ಏರಿದ್ದಾರೆ. ಆದರೆ ಕಾಂಗ್ರೆಸ್‌ನ ಕಪಟ ಬುದ್ಧಿ ಮತ್ತು ರಾಹುಲ್ ಗಾಂಧಿಯವರ ಅಜ್ಞಾನಗಳೆರಡನ್ನೂ ಕಂಡ ದೇಶದ ಜನ ಮಾತ್ರ ಇವ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: 'ನಾವು ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಖಂಡಿತ': ರೈಲಿನಲ್ಲಿ ಪ್ರಯಾಣಿಸಿ ರಾಹುಲ್ ಗಾಂಧಿ ಘೋಷಣೆ