ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ನಾಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಹುಲ್ ಗಾಂಧಿ ಎಲ್ಲ ಕೆಪಿಸಿಸಿ ಅಧ್ಯಕ್ಷರ ಜೊತೆ ನಿನ್ನೆ ರಾತ್ರಿ ಸಭೆ ನಡೆಸಿದ್ದಾರೆ. ನಿನ್ನೆ ಅವರು ನಮ್ಮೆಲ್ಲರ ಜೊತೆ ಕಾನ್ಫರೆನ್ಸ್ ಮಾಡಿದ್ರು. ಹೀಗಾಗಿ ಅವರ ಸೂಚನೆಯಂತೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಳೆ ಗಾಂಧಿ ಪ್ರತಿಮೆ ಬಳಿ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕ್ರಮ ಮಾಡಿ ಸೋಷಿಯಲ್ ಮೀಡಿಯಾ ಮೂಲಕ ಪ್ರದರ್ಶಿಸುತ್ತೇವೆ. ಹಾಗೆಯೇ ಮೃತ ಯೋಧರ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಜೂ.29 ರಂದು ಹಿರಿಯ ನಾಯಕರ ಸಭೆ ಕರೆದಿದ್ದು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸುತ್ತೇವೆ. ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದರು.
ಇಂಧನ ಬೆಲೆ ಏರಿಕೆ:ಲಾಕ್ಡೌನ್ ಆದ ಮೇಲೆ ದೇಶದ ನಾಗರಿಕರನ್ನ ಕೇಂದ್ರ ಸುಲಿಗೆ ಮಾಡುತ್ತಿದೆ. ಡೀಸೆಲ್ ಮೇಲೆ ಶೇ.26.48 ಹಾಗೂ ಪೆಟ್ರೋಲ್ ಮೇಲೆ ಶೇ.21 ತೆರಿಗೆ ಹಾಕಿದ್ದಾರೆ. 3,288 ರೂ. ಪ್ರತಿ ಬ್ಯಾರಲ್ ಬೆಲೆಯಿದೆ. ಸರ್ಕಾರ ಪ್ರತಿ ಲೀಟರ್ಗೆ 20ರೂ ನಿಗದಿ ಮಾಡಬೇಕಿತ್ತು. ಆದರೆ 80 ರೂವರೆಗೆ ಏರಿಕೆಯಾಗುತ್ತಿದೆ. ಹೀಗಾಗಿ ಜೂನ್ 29 ರಂದು ಧರಣಿ ಮಾಡುತ್ತೇವೆ ಎಂದು ತಿಳಿಸಿದ ಅವರು, ಪಿಎಂ, ಸಿಎಂ ಕೇರ್ ಗೆ ಹಣ ಹರಿದು ಬರುತ್ತಿದೆ. ಇದನ್ನ ಬಳಸಿಕೊಂಡು ಜನರಿಗೆ ಉಚಿತ ಚಿಕಿತ್ಸೆ ನೀಡುವುದು ಬಿಟ್ಟು, ಬಡವರಿಂದ ಹಣ ವಸೂಲಿ ಯಾಕೆ ಮಾಡ್ತೀರಾ? ಎಂದು ಪ್ರಶ್ನಿಸಿದರು.
ಜುಲೈ 2 ರಂದು ಪದಗ್ರಹಣ: ಜುಲೈ 2 ರಂದು ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಫಾರಿನ್ ನಿಂದ ಬಂದವರಿಗಷ್ಟೇ ಅಲ್ಲ. ಆಶಾ ಕಾರ್ಯಕರ್ತೆಯರು, ವೈದ್ಯರು, ಐಎಎಸ್ ಅಧಿಕಾರಿಗಳು ಎಲ್ಲರೂ ಕೂಡ ಒಂದೇ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಕೊಡಬೇಕು. ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದರು.
ದೇಶದ ಜನರನ್ನು ಜೀವಂತ ಕೊಂದಿದ್ದಾರೆ:ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ವಿಚಾರ ಮಾತನಾಡಿ, ಲಾಕ್ಡೌನ್ ಮಾಡುವುದಕ್ಕೆ ಮುಂಚಿತವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿದ್ದರೆ, ಬೆಡ್ ಕೊರತೆ ಕಾಣಿಸುತ್ತಿರಲಿಲ್ಲ. ನಿಯಂತ್ರಣ ವಿಚಾರದಲ್ಲಿ ಸಂಪೂರ್ಣ ಫೇಲ್ಯೂರ್ ಆಗಿದೆ. ಒಂದು ಆ್ಯಂಬುಲೆನ್ಸ್ ಕಳಿಸೋಕು ಆಗಲ್ಲ. ಜನ ಬದುಕಿದ್ದೂ ಸತ್ತಂತೆಯೇ. ಇಡೀ ದೇಶದಲ್ಲಿ ಜನರನ್ನ ಜೀವಂತ ಕೊಂದಿದ್ದಾರೆ ಎಂದು ಆರೋಪಿಸಿದರು.