ಬೆಂಗಳೂರು:ಭಾರತ್ ಮಾತಾ ಕಿ ಜೈ ಎನ್ನುವುದೇ ಅಪಾಯಕಾರಿ ರೋಗಿ ಎಂದವರನ್ನಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಒಕ್ಕೂಟ ವ್ಯವಸ್ಥೆ ರಚನೆ ವಿರುದ್ಧ ಹೇಳಿಕೆ ನೀಡಿ ಮತ್ತೊಮ್ಮೆ ದೇಶ ವಿಭಜನೆಯಂತಹ ಚಟುವಟಿಕೆಗೆ ಮುಂದಾಗಿದ್ದಾರೆ. ಆದರೆ, ಪ್ರತಿಯೊಬ್ಬ ಹಿಂದೂಸ್ತಾನಿ ಒಟ್ಟಾಗಿರುವವರೆಗೂ ಅದು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದರು.
ದೊಡ್ಡಬಳ್ಳಾಪುರದಲ್ಲಿ ಇಂದು ನಡೆದ ಬಿಜೆಪಿ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಹೆಸರಿನಲ್ಲಿ ರಾಹುಲ್ ಗಾಂಧಿ ಇಂದು ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಗಾಂಧಿ ಕುಟುಂಬದ ರಾಜಕುಮಾರನಿಗೆ ಭಾರತವನ್ನು ಹಿಂದೆ ಬೇರ್ಪಡಿಸುವ ಕೆಲಸ ಯಾರು ಮಾಡಿದ್ದರು ಎಂದು ಪ್ರಶ್ನೆ ಮಾಡಬೇಕಿದೆ ಎಂದರು.
ಇದನ್ನೂ ಓದಿ:ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್
ಭಾರತ ಜೋಡೋ ಯಾತ್ರೆಯಲ್ಲಿ ಯಾರ ಜೊತೆ ಹೆಜ್ಜೆ ಹಾಕುತ್ತಿದ್ದೀರಿ?. ಭಾರತ ತುಕ್ಡೆ ತುಕ್ಡೆ ಹೋಂಗೆ ಅಂತ ಹೇಳಿದವರನ್ನು ಜೊತೆಗೆ ಕರೆದುಕೊಂಡು ಹೊಗುತ್ತಿದ್ದೀರಿ. ಇದು ರಾಷ್ಟ್ರದ್ರೋಹಕ್ಕೆ ಸಮನಾದ ಕೆಲಸ. ಭಾರತ್ ವಿಭಜಿಸುವ ಹೇಳಿಕೆ ಕೊಟ್ಟವರಿಗೆ ಬೆಂಬಲ ಕೊಡೋದು ರಾಷ್ಟ್ರದ್ರೋಹ. ಈ ರಾಷ್ಟ್ರದ್ರೋಹದ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಅವರ ನಾಯಕರಿಗೆ ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಒಕ್ಕೂಟ ರಚನೆ ವ್ಯವಸ್ಥೆ ಬಗ್ಗೆಯೇ ರಾಹುಲ್ ಗಾಂಧಿ ಸಮರ ಸಾರುವ ಹೇಳಿಕೆ ನೀಡಿದ್ದಾರೆ. ಮತ್ತೊಮ್ಮೆ ದೇಶ ವಿಭಜನೆಗೆ ಮುಂದಾಗಿದ್ದಾರೆ. ರಾಹುಲ್ ಗಾಂಧಿಗೆ ರಾಷ್ಟ್ರದ ಹಿತಕ್ಕಿಂತ ಅಧಿಕಾರಕ್ಕೇರುವುದು ಮುಖ್ಯವಾಗಿದೆ. ಇದು ಅವರ ಅಧಿಕಾರದ ಹಪಾಹಪಿ ಎತ್ತಿ ತೋರಿಸಲಿದೆ. ಹಿಂದೂಸ್ತಾನಿಗಳು ಒಂದಾಗಿರುವ ತನಕ ಇಂತಹ ವಿಭಜನೆ ಕುತಂತ್ರಗಳು ಸಾಧ್ಯವಿಲ್ಲ,,ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ. ಈ ದೇಶದಲ್ಲಿ ದೇಶಪ್ರೇಮಿಗಳು ಇರುವವರೆಗೂ ಈ ದೇಶ ಇಬ್ಭಾಗ ಆಗಲು ಬಿಡುವುದಿಲ್ಲ ಎಂದು ಗುಡುಗಿದರು.
ನಮಗೆ ಅಧಿಕಾರಕ್ಕಿಂತ ದೇಶವೇ ಮುಖ್ಯ:ಸ್ವಾತಂತ್ರ್ಯ ಬಂದ ನಂತರ ಸುದೀರ್ಘ ಕಾಲ ಆಳ್ವಿಕೆ ನಡೆಸಿದವರಿಗೆ ಈಗ ಅಧಿಕಾರ ಕೈತಪ್ಪಿದ್ದನ್ನು ಸಹಿಸಲಾಗುತ್ತಿಲ್ಲ. ಆದರೆ, ರಾಜ್ಯದಲ್ಲಿ ನಮ್ಮ ಹಿರಿಯ ನಾಯಕ ಯಡಿಯೂರಪ್ಪ ಸುದೀರ್ಘ ಕಾಲ ಅಧಿಕಾರ ಸಿಗದೇ ವಿರೋಧ ಪಕ್ಷದಲ್ಲೇ ಇದ್ದರೂ ಭಾರತ್ ಮಾತಾ ಕಿ ಜೈ ಅನ್ನೋದು ಬಿಡಲಿಲ್ಲ. ನಮ್ಮ ರಾಷ್ಟ್ರೀಯ ನಾಯಕರೂ ಭಾರತ ಮಾತೆ ವಿರುದ್ಧ ಮಾತನಾಡಲಿಲ್ಲ. ನಮಗೆ ಅಧಿಕಾರಕ್ಕಿಂತ ದೇಶವೇ ಮುಖ್ಯ ಎಂದು ಸ್ಮೃತಿ ಇರಾನಿ ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, 150 + ಸ್ಥಾನದೊಂದಿಗೆ ಮತ್ತೆ ನಮ್ದೆ ಸರ್ಕಾರ: ಯಡಿಯೂರಪ್ಪ
ವಲ್ಲಬಭಾಯಿ ಪಟೇಲ್ ಪ್ರತಿಮೆಗೆ ಮಾಡಿದ್ದನ್ನು ಇಡೀ ವಿಶ್ವವೇ ಮೆಚ್ಚಿದೆ. ಆದರೆ, ಇವರಿಗೆ ಅದು ರುಚಿಸಲಿಲ್ಲ. ಸ್ವಾಮಿ ವಿವೇಕಾನಂದ ಅವರ ಪ್ರತಿಮೆಗೆ ಒಂದು ನಮನ ಸಲ್ಲಿಸಲಿಲ್ಲ. ಯಾಕೆಂದರೆ ಅವರು ಗಾಂಧಿ ಕುಟುಂಬದವರಲ್ಲ. ಪ್ರಧಾನಿ ರಾಜಪಥವನ್ನು ಕರ್ತವ್ಯಪಥ ಎಂದು ಘೋಷಿಸಿ, ಸುಭಾಶ್ಚಂದ್ರ ಬೋಸರ ಪ್ರತಿಮೆ ನಿರ್ಮಿಸಿದರು. ಅದಕ್ಕೆ ಗಾಂಧಿ ಕುಟುಂಬದಿಂದ ಒಂದು ಮಾತು ಬರಲಿಲ್ಲ. ಯಾಕೆಂದರೆ ಅವರು ಗಾಂಧಿ ಕುಟುಂಬದವರಲ್ಲ, ಇನ್ನು ಮೋದಿಯವರು ಗುಲಾಮಿತನ ಸಂಕೇತವನ್ನು ತೆಗೆದು ಶಿವಾಜಿಯವರ ಚಿಹ್ನೆಯನ್ನು ನೌಕಾಪಡೆ ಧ್ವಜದಲ್ಲಿ ಹಾಕಿದ್ದಾರೆ ಎಂದರು.