ಬೆಂಗಳೂರು: ಆತ ಬುದ್ದಿವಂತ ಬಾಲಕ. ಓದುವುದರಲ್ಲಿ ಟಾಪ್ ಸ್ಟೂಡೆಂಟ್ ಆಗಿದ್ದ. ಆತನ ಮನಸ್ಸು ಇತ್ತೀಚೆಗೆ ಬದಲಾಗಿತ್ತು. ಯಾರೊಂದಿಗೂ ಸೇರಲು ಬಯಸದ ಆತ ಅದೊಂದು ದಿಟ್ಟ ನಿರ್ಧಾರ ಮಾಡಿದ್ದ. ತನ್ನ ಜೀವಕ್ಕೆ ಕುತ್ತು ತಂದುಕೊಂಡಿದ್ದ. ಅದರ ಸತ್ಯ ಹುಡುಕಿ ಹೊರಟ ಪೊಲೀಸರಿಗೆ ಆತನಿಗೆ ಕಾಡಿದ್ದ ಖಿನ್ನತೆಯೇ ಘಟನೆಗೆ ಕಾರಣವಾಯ್ತಾ ಎಂಬ ಅನುಮಾನ ಶುರುವಾಗಿದೆ.
ವಿದ್ಯಾರ್ಥಿ ರಾಹುಲ್ ಭಂಡಾರಿಗೆ ಮಾನಸಿಕ ಖಿನ್ನತೆ..?
ಸೆ.17ರಂದು ಸಂಜಯ್ ನಗರ ಮುಖ್ಯರಸ್ತೆ ಬಸ್ ನಿಲ್ದಾಣದ ಬಳಿ ಗನ್ನಿಂದ ಶೂಟ್ ಮಾಡಿಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿನ ಹಿಂದಿನ ಅಸಲಿ ಕಹಾನಿ ಏನು ಎಂದು ತನಿಖೆ ಆರಂಭಿಸಿದ್ದ ಸದಾಶಿವನಗರ ಪೊಲೀಸರಿಗೆ ಹಲವು ಅನುಮಾನ ಶುರುವಾಗಿತ್ತು. ಇದೀಗ ಪೋಷಕರು ಬಿಚ್ಚಿಟ್ಟ ಕೆಲವೊಂದು ಮಾಹಿತಿ ಆತನಿಗಿದ್ದ ಕೆಲವು ಸಮಸ್ಯೆಗಳನ್ನು ತೆರೆದಿಟ್ಟಿದೆ.
ಇದನ್ನು ಓದಿ: ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಬಹಿರಂಗ: ರೂ. 500 ಕೊಡದಿದ್ದಕ್ಕೆ ಗುಂಡು ಹಾರಿಸಿಕೊಂಡನಾ?
ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ರಾಹುಲ್...
ಮೊದಲಿಗೆ ಆತನ ಮೃತದೇಹದ ಬಳಿ ಪತ್ತೆಯಾದ ಮೊಬೈಲ್ ಪರಿಶೀಲಿಸಿದ್ದ ಪೊಲೀಸರಿಗೆ ಆತ ಯಾವುದೇ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ಆ್ಯಪ್ ಬಳಸದೇ ಇರುವುದು ತಿಳಿದು ಬಂದಿದೆ. ಅಲ್ಲದೇ, ಈ ಬಗ್ಗೆ ಪೋಷಕರನ್ನು ವಿಚಾರಿಸಿದಾಗ, ಆತ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಎಂಬ ಮಾಹಿತಿ ದೊರಕಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಹ ಆತ ಹೆಚ್ಚು ಜನರ ಜೊತೆ ಮಾತನಾಡುತ್ತಿರಲಿಲ್ಲ. ಜೊತೆಗೆ ಹೆಚ್ಚಾಗಿ ಒಂಟಿಯಾಗಿ ಇರುತ್ತಿದ್ದ ಎಂದು ಹೇಳಿದ್ದಾರೆ.
ಮಧ್ಯರಾತ್ರಿವರೆಗೆ ಓದುವುದು, ವ್ಯಾಯಾಮ ಮಾಡುವುದು, ವಾಕಿಂಗ್ ಹೋಗುವುದು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತಿದ್ದನಂತೆ. ಇದು ಒಳ್ಳೆಯ ಅಭ್ಯಾಸ ಅಂದುಕೊಂಡಿದ್ದ ಪೋಷಕರು ಈ ಬಗ್ಗೆ ಆತನ ಬಳಿ ಹೆಚ್ಚು ವಿಚಾರಿಸಲು ಹೋಗಿರಲಿಲ್ಲ.
ಇತ್ತಿಚಿನ ದಿನಗಳಲ್ಲಿ ಈ ರೀತಿಯಲ್ಲಿ ಬದಲಾವಣೆ ಕಂಡಿದ್ದ ರಾಹುಲ್, ಯಾವುದೇ ಕೆಲಸ ಮಾಡುವಾಗ ತನ್ನದೇ ಆದ ಟಾರ್ಗೆಟ್ ಇಟ್ಟುಕೊಳ್ಳುತಿದ್ದನಂತೆ. ಅಲ್ಲದೇ, ಆ ಟಾರ್ಗೆಟ್ ರೀಚ್ ಆಗದಿದ್ದಾಗ ಸಾಕಷ್ಟು ಬೇಸರ ಮಾಡಿಕೊಳ್ಳುತ್ತಿದ್ದನಂತೆ. ಇನ್ನು ಈತನ ನಡವಳಿಕೆಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವ ಅಂಶದಂತೆ ಕಂಡಿದ್ದು, ಪೋಷಕರಿಂದ ಮತ್ತಷ್ಟು ವಿಚಾರ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ.