ಬೆಂಗಳೂರು: ಚಿಂದಿ ಆಯುವ ಮಹಿಳೆಯೊಬ್ಬಳು ಇಂಗ್ಲಿಷ್ನಲ್ಲಿ ಮಾತನಾಡುವ ಕೌಶಲ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.
ಶಚಿನಾ ಹೆಗ್ಗರ್ ಎನ್ನುವವರು ತಮ್ಮಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸಿಸಿಲಿಯಾ ಮಾರ್ಗರೆಟ್ ಲಾರೆನ್ಸ್ ಎಂದು ಇಂಗ್ಲಿಷ್ನಲ್ಲಿ ತನ್ನ ಹೆಸರು ಹೇಳುವ ಮಹಿಳೆಯ ವಿಡಿಯೋ ಇದಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಿಸಿಲಿಯಾ ಸದಾಶಿವನಗರದಲ್ಲಿ ಇಂಗ್ಲಿಷ್ನಲ್ಲಿ ಹಾಡು ಹಾಡುತ್ತಾ ಚಿಂದಿ ಆಯುತ್ತಿರುವುದನ್ನು ಕಂಡ ಶಚಿನಾ, ಅವಳ ಜೊತೆ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಶಚಿನಾ ಆ ಮಹಿಳೆಯೊಂದಿಗೆ ಮಾತನಾಡುತ್ತಾ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಸಿಸಿಲಿಯಾ ಇಂಗ್ಲಿಷ್ನಲ್ಲಿ ಅರಳು ಹುರಿದಂತೆ ಉತ್ತರ ನೀಡಿದ್ದಾರೆ.
ಈ ಅದ್ಭುತವನ್ನು ಕಂಡ ಶಚಿನಾ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. 'ಕಥೆಗಳು ಯಾವಾಗಲೂ ನಮ್ಮ ಸುತ್ತಲೂ ಇರುತ್ತವೆ. ಕೆಲವು ಸುಂದರ, ಕೆಲವು ನೋವಿನ, ಕೆಲವು ಹೂವುಗಳಿಲ್ಲದ ಜೀವನ ತೋರಿಸುತ್ತವೆ. ಈ ಅದ್ಭುತ ಚೈತನ್ಯದ ಮಹಿಳೆಯೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ನಿಮ್ಮಲ್ಲಿ ಯಾರಾದರೂ ಅವಳನ್ನು ನೋಡಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ ಎಂದೂ ಸಹ ಕೇಳಿಕೊಂಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಅವಳು ಓರ್ವ ಪ್ರದರ್ಶಕಿ ಎಂದೂ ಬರೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ.