ಸ್ಯಾಂಡಲ್ವುಡ್ ಡ್ರಗ್ ಕೇಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ರಾಗಿಣಿಗೆ ಡ್ರಗ್ ಪ್ರಕರಣ ಮತ್ತೊಂದು ಸಂಕಷ್ಟ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕಾಟನ್ ಪೇಟೆ ಪೊಲೀಸರು ಕೇಸ್ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡುತ್ತಿದ್ದರೆ ಮತ್ತೊಂದೆಡೆ ಬಾಣಸವಾಡಿ ಪ್ರಕರಣದಲ್ಲೂ ರಾಗಿಣಿ ಆರೋಪಿಯೆಂದು ಉಲ್ಲೇಖ ಮಾಡಲಾಗುತ್ತಿದೆ. ಈಗಾಗಲೇ ಪ್ರಕರಣಕ್ಕೆ ಬೇಕಾದ ಸಾಕ್ಷಿಗಳು ,ಬಂಧಿತ ಆರೋಪಿಗಳ ಹೇಳಿಕೆ ಎಲ್ಲವನ್ನೂ ಪೊಲೀಸರು ಸಂಗ್ರಹಿಸಿದ್ದಾರೆ.
ತನ್ನ ಆಪ್ತ ರವಿಶಂಕರ್ನಿಂದಲೇ ರಾಗಿಣಿ ಬಾಣಸವಾಡಿ ಕೇಸ್ನಲ್ಲೂ ಹಳ್ಳಕ್ಕೆ ಬಿದ್ದಿದ್ದಾರೆ. ಸಿಸಿಬಿ ಪೊಲೀಸರು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಬಾಣಸವಾಡಿಯ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲಿದ್ದು ರಾಗಿಣಿ ಈ ಪ್ರಕರಣವನ್ನೂ ಎದುರಿಸಬೇಕಿದೆ.
ಏನಿದು ಪ್ರಕರಣ...?
2018 ರಲ್ಲಿ ಡ್ರಗ್ ಕೇಸ್ಗೆ ಸಂಬಂಧ ಬಾಣಸವಾಡಿಯ ಪ್ರತೀಕ್ ಶೆಟ್ಟಿ ಎಂಬಾತನನ್ನು ಮೊದಲು ಬಂಧಿಸಲಾಗಿತ್ತು. ಈತನ ಜೊತೆ ನೈಜೀರಿಯನ್ ಪ್ರಜೆಗಳನ್ನು ಕೂಡಾ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಪ್ರತೀಕ್, ಮತ್ತೆ ತನ್ನ ದಂಧೆಯನ್ನು ಮುಂದುವರೆಸಿದ್ದ. ಇತ್ತೀಚೆಗೆ ಕಾಟನ್ ಪೇಟೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಶಂಕರ್ ವಿಚಾರಣೆ ನಡೆಸಿದಾಗ ಪ್ರತೀಕ್, ರಾಗಿಣಿ ಆಪ್ತ ರವಿಶಂಕರ್ ಸಹಚರ ಎಂಬುದು ತಿಳಿದುಬಂದಿತ್ತು. ಹೀಗಾಗಿ ಪ್ರತೀಕ್ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು,ಈತನೊಂದಿಗೆ ಆದಿತ್ಯ ಅಗರ್ವಾಲ್ನನ್ನು ಕೂಡಾ ಬಂಧಿಸಿದ್ದರು. ಆದಿತ್ಯ ಅಗರ್ ವಾಲ್ ಹಾಗೂ ವೀರೇನ್ ಖನ್ನಾ ಬಗ್ಗೆ ತನಿಖೆ ನಡೆಸಿದಾಗ 2018 ರಿಂದಲೂ ರಾಗಿಣಿ ಹಾಗೂ ರವಿಶಂಕರ್ ಬಹಳ ಆತ್ಮೀಯರು ಎಂಬ ವಿಚಾರವನ್ನು ಪ್ರತೀಕ್ ಬಾಯಿ ಬಿಟ್ಟಿದ್ದನು.
ಪ್ರತೀಕ್ ರಾಗಿಣಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವಿಚಾರ ಕೂಡಾ ವಿಚಾರಣೆ ವೇಳೆ ತಿಳಿದುಬಂದಿದೆ. ಆದರೆ ರಾಗಿಣಿ ಡೈರೆಕ್ಟ್ ಆಗಿ ನನ್ನ ಬಳಿ ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ರವಿಶಂಕರ್ ಮುಖಾಂತರ ತರಿಸಿ ತಾನು ಸೇವನೆ ಮಾಡಿ ನಂತರ ರಾಗಿಣಿಗೆ ಸಪ್ಲೈ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ರಾಗಿಣಿಗೆ ಬಾಣಸವಾಡಿ ಕೇಸ್ ಕೂಡಾ ಸಂಕಷ್ಟಕ್ಕೆ ತಳ್ಳಿದೆ ಎನ್ನಲಾಗುತ್ತಿದೆ.
ಸದ್ಯ ಹೈಕೋರ್ಟ್ನಲ್ಲಿ ಕೂಡಾ ಜಾಮೀನು ಅರ್ಜಿ ನಿರಾಕರಣೆಯಾಗಿರುವುದರಿಂದ ರಾಗಿಣಿ, ಜೈಲಿನಲ್ಲಿ ಮಂಕಾಗಿ ಜೀವನ ನಡೆಸುತ್ತಿದ್ದಾರೆ. ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಮುಂದಿನ ನಿರ್ಧಾರದ ಬಗ್ಗೆ ವಕೀಲರು ಕೂಡಾ ಗಮನ ಹರಿಸಬಹುದು.ಅಲ್ಲಿಯವರೆಗೆ ರಾಗಿಣಿ ನಾಲ್ಕು ಗೋಡೆಯ ಮಧ್ಯೆ ಇರುವುದು ಅನಿವಾರ್ಯವಾಗಿದೆ.