ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣದ ದಾಖಲೆಗಳನ್ನು ಕನ್ನಡದಿಂದ ಇಂಗ್ಲೀಷ್ಗೆ ತರ್ಜುಮೆ ಮಾಡುವ ಕಾರ್ಯ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ತರ್ಜುಮೆ ಕಾರ್ಯ ಮುಗಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಯುಬಿ ವೆಂಕಟೇಶ್ ನಿಯಮ 72 ರ ಅಡಿ ಗಮನ ಸೆಳೆಯುವ ಸೂಚನೆಗೆ ಉತ್ತರಿದ ಸಚಿವರು, ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಎರಡು ವರ್ಷದಿಂದ ಆಗ್ರಹಿಸುತ್ತಿದೆ. ಈಗಾಗಲೇ ಸಿಬಿಐಗೆ ಕೊಡುವ ನಿರ್ಣಯ ಮಾಡಲಾಗಿದೆ. ಅದರಂತೆ ದಾಖಲಾತಿಗಳನ್ನು ಕನ್ನಡದಿಂದ ಇಂಗ್ಲೀಷ್ಗೆ ತರ್ಜುಮೆ ಮಾಡುವ ಕೆಲಸ ಮಾಡಲಾಗುತ್ತಿದೆ. ತರ್ಜುಮೆ ಮುಗಿಯುತ್ತಿದ್ದಂತೆ ಸಿಬಿಐಗೆ ಪ್ರಕರಣವನ್ನು ವಹಿಸಲಾಗುತ್ತದೆ ಎಂದರು.
ರಾಘವೇಂದ್ರ ಸಹಕಾರ ಬ್ಯಾಂಕ್ ಲಿಕ್ವಿಡೇಶನ್ ಆಗಬಾರದು ಎನ್ನುವುದು ಸರ್ಕಾರದ ಆಶಯವಾಗಿದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನವರು ಪತ್ರ ಬರೆದು ನಿಮ್ಮ ನೋಂದಣಿ ಮತ್ತು ಪರವಾನಗಿಯನ್ನು ಏಕೆ ರದ್ದುಪಡಿಸಬಾರದು ಎಂದು ಕಾರಣ ಕೇಳಿ ತಿಂಗಳೊಳಗೆ ಉತ್ತರಿಸುವಂತೆ ಬ್ಯಾಂಕ್ಗೆ ಸೂಚಿಸಿದ್ದಾರೆ. ನೋಂದಣಿ ಮತ್ತು ಪರವಾನಗಿ ರದ್ದುಪಡಿಸದಂತೆ ಸರ್ಕಾರದಿಂದಲೂ ಮನವಿ ಮಾಡಿ ಉತ್ತರ ಕಳಿಸಿಕೊಡಲಾಗುತ್ತದೆ ಎಂದು ರಾಜಣ್ಣ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ವೈ ಎ ನಾರಾಯಣಸ್ವಾಮಿ, ಸಿಬಿಐಗೆ ಕೊಡುವ ನಿರ್ಧಾರ ಬಿಜೆಪಿ ಸರ್ಕಾರ ಮಾಡಿತ್ತು. ಪ್ರಕರಣದ ಕಡತಗಳ ತರ್ಜುಮೆ ಕೆಲಸವನ್ನೂ ಆರಂಭಿಸಿತ್ತು. ನಮಗೆ ಕಾಳಜಿ ಇದ್ದ ಕಾರಣಕ್ಕಾಗಿ ನಾವು ಸಿಬಿಐಗೆ ವಹಿಸಿದ್ದೆವು ಎಂದು ಸಿಬಿಐ ನಿರ್ಧಾರ ಬಿಜೆಪಿಯದ್ದು ಎಂದು ಸಮರ್ಥಿಸಿಕೊಂಡರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಡಳಿತ ಪಕ್ಷದ ಶಾಸಕರು, ಬಿಜೆಪಿಗೆ ಬದ್ದತೆ ಇರಲಿಲ್ಲ. ಹಾಗಾಗಿ ಕಾಲಹರಣ ಮಾಡಿದರು. ಈಗ ನಾವು ಅಧಿಕಾರಕ್ಕೆ ಬಂದಿದ್ದೇವೆ ತನಿಖೆ ಮಾಡಿಸುತ್ತೇವೆ ಎಂದರು. ಈ ವೇಳೆ ಪ್ರಕರಣ ಸಿಬಿಐಗೆ ವಹಿಸಿದ ಕ್ರೆಡಿಟ್ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ಜಟಾಪಟಿ, ವಾಗ್ವಾದ ನಡೆಯಿತು.