ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನಾಗಿ ಮನೆ ಮಾತಾಗಿದ್ದ ಚಿಕ್ಕಮಗಳೂರಿನ ಚಾಕಲೇಟ್ ಹುಡುಗ ಸ್ಕಂದ ಅಶೋಕ್ ರನ್ನು ಮೆಚ್ಚದವರಿಲ್ಲ! ಮನೋಜ್ಞ ಅಭಿನಯದ ಮೂಲಕ ಹೆಣ್ಣು ಮಕ್ಕಳ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಸ್ಕಂದ ಅಶೋಕ್ ಇದೀಗ ಸಂಭ್ರಮದಲ್ಲಿದ್ದಾರೆ. ಮಾತ್ರವಲ್ಲ ತಮ್ಮ ಸಂಭ್ರಮಕ್ಕೆ ಕಾರಣವಾದ ವಿಚಾರವನ್ನು ಸ್ವತಃ ಸ್ಕಂದ ಅಶೋಕ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶೀಘ್ರದಲ್ಲೇ ತಂದೆ ಆಗಲಿದ್ದಾರೆ ರಾಧಾರಮಣ ಸ್ಕಂದ - ಚಿಕ್ಕಮಗಳೂರಿನ ಚಾಕಲೇಟ್ ಹುಡುಗ ಸ್ಕಂದ ಅಶೋಕ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕನಾಗಿದ್ದ ಸ್ಕಂದ ಅಶೋಕ್ ಇದೀಗ ತಂದೆಯಾಗುವ ಸಂಭ್ರಮದಲ್ಲಿದ್ದಾರೆ.
ಸಂಭ್ರಮದ ಸುದ್ದಿ ಎಂದ ಕೂಡಲೇ ಕಿರುತೆರೆ ವೀಕ್ಷಕರಿಗೆ ಥಟ್ ಎಂದು ನೆನಪಾಗುವುದು ಸೀರಿಯಲ್. ರಮಣನಾಗಿ ಕಿರುತೆರೆಯಾದ್ಯಂತ ಮನೆಮಾತಾದ ಚಿಕ್ಕಮಗಳೂರಿನ ಚೆಲುವ ಮತ್ತೊಮ್ಮೆ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎಂದರೆ ನಿಮ್ಮ ಊಹೆ ಅಕ್ಷರಶಃ ತಪ್ಪು. ಯಾಕೆಂದರೆ ಸ್ಕಂದ ಅವರು ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ಸ್ಕಂದ ಮತ್ತು ಪತ್ನಿ ಶಿಖಾ ಪ್ರಸಾದ್ ಅವರು ಈ ಸಂಭ್ರಮದ ವಿಚಾರವನ್ನು ಸ್ವತಃ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದ ಶಿಖಾ ಪ್ರಸಾದ್ ಮತ್ತು ಕಿರುತೆರೆ, ಬೆಳ್ಳಿತೆರೆ ನಟ ಸ್ಕಂದ ಅಶೋಕ್ ಅವರು 2018 ರ ಮೇ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬರೋಬ್ಬರಿ ನಾಲ್ಕು ವರುಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಶಿಖಾ ಅವರು ಗರ್ಭಿಣಿಯಾಗಿದ್ದು ಮದ್ದು ಕಂದನಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.