ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ನಿರ್ಧಾರಕ್ಕೆ ಸ್ವಾಗತ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನಮ್ಮ ತಕರಾರು ಇಲ್ಲ. ಅದೇ ರೀತಿ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನೂ ರಚಿಸಲಿ ಎಂದು ಬಿಜೆಪಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
ಒಕ್ಕಲಿಗರ ಅಭಿವೃದ್ಧಿ ನಿಗಮ ರಚಿಸಲಿ: ಶಾಸಕ ಎಸ್. ಆರ್. ವಿಶ್ವನಾಥ್ ಒತ್ತಾಯ - R. Vishwanath demands to establish vokkaligara development corporation
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಆದೇಶ ಹೊರಬಂದ ಬೆನ್ನಲ್ಲೇ ಒಕ್ಕಲಿಗರ ಅಭಿವೃದ್ಧಿ ನಿಗಮದ ರಚನೆಗೂ ಕೂಗು ಕೇಳಿ ಬರುತ್ತಿದೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯ ದೊಡ್ಡದು. ಅದೇ ರೀತಿ ಒಕ್ಕಲಿಗ ಸಮುದಾಯವೂ ದೊಡ್ಡದು. ಒಕ್ಕಲಿಗ ಸಮುದಾಯದಲ್ಲೂ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ. ಹಾಗಾಗಿ ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆಗೆ ನಾವೂ ಒತ್ತಾಯ ಮಾಡುತ್ತೇವೆ. ಸಮುದಾಯದ ಸಚಿವರು, ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.
ತಾವು ಸಚಿವ ಸ್ಥಾನದ ಆಕಾಂಕ್ಷಿಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ, ನಾನು ಇದುವರೆಗೂ ಸ್ಥಾನ ಮಾನದ ಬಗ್ಗೆ ಕೇಳಿಲ್ಲ. ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದು ತಿಳಿಸಿದರು.