ಬೆಂಗಳೂರು :ನಾವು ಅನರ್ಹರಿಂದ ಇದೀಗ ಅರ್ಹರಾಗಿದ್ದೇವೆ, ವಿಧಾನ ಪರಿಷತ್ ಸದಸ್ಯರಾಗಿದ್ದೇವೆ. ಸಚಿವ ಸ್ಥಾನ ನಮಗೆ 100ಕ್ಕೆ 100%ರಷ್ಟು ಸಿಗುತ್ತದೆ ಎಂದು ನೂತನ ಪರಿಷತ್ ಸದಸ್ಯ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿ ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಚಿವರನ್ನಾಗಿ ಮಾಡುತ್ತಾರೆ. ಅವರು ಇಚ್ಚಿಸಿದ್ರೆ ನಾಳೆ ಬೇಕಾದ್ರೂ ಸಚಿವನನ್ನಾಗಿ ಮಾಡಬಹುದು ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಪರಿಷತ್ ಸದಸ್ಯರು.. ಭಾಗ ಒಂದು ಮುಗಿದಿದೆ :ಇದೇ ವೇಳೆ ಪರಿಷತ್ ಸದಸ್ಯತ್ವದ ಪ್ರಮಾಣ ಪತ್ರ ಪಡೆದ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಈಗ ಭಾಗ ಒಂದು ಮುಗಿದಿದೆ. ನಾವು ಇಂದು ಅರ್ಹರಾಗಿ ಪ್ರಮಾಣಪತ್ರ ಪಡೆದಿದ್ದೇವೆ. 2ನೇ ಭಾಗ ಮುಂದಿನ ದಿನ ಗೊತ್ತಾಗುತ್ತದೆ ಎಂದರು. ಸಚಿವ ಸ್ಥಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಹೈಕಮಾಂಡ್, ನಮ್ಮ ನಾಯಕ ಯಡಿಯೂರಪ್ಪ ಈ ಬಗ್ಗೆ ನಿರ್ಧರಿಸುತ್ತಾರೆ. ನಾವು ನೀವು ಅದಕ್ಕಾಗಿ ಸ್ವಲ್ಪ ದಿನ ಕಾಯೋಣ ಎಂದರು.
ನಾನು ಪಕ್ಷದ, ವರಿಷ್ಠರ ನಿರ್ಧಾರದ ಅಭ್ಯರ್ಥಿ :ಪರಿಷತ್‌ನ ನೂತನ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನಾನು ಒಬ್ಬರ ಆಯ್ಕೆ ಅಲ್ಲ. ಆ ರೀತಿ ನಮ್ಮ ಪಕ್ಷದಲ್ಲಿ ಕ್ರಮ ಇಲ್ಲ. ನಾನು ಪಕ್ಷದ, ಪಕ್ಷದ ವರಿಷ್ಠರ, ನಾಯಕರ ನಿರ್ಧಾರದ ಅಭ್ಯರ್ಥಿಯಾಗಿದ್ದೇನೆ ಎಂದರು.
ರಾಜಕೀಯವಾಗಿ ಮಾಧ್ಯಮಕ್ಕೆ ಕುತೂಹಲ ತರುವ ವ್ಯಕ್ತಿ ನಾನಲ್ಲ. ಒಬ್ಬ ಕಾರ್ಯಕರ್ತನನ್ನು ಪಕ್ಷದ ವರಿಷ್ಠರು, ನಮ್ಮ ನಾಯಕ ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಗುರ್ತಿಸಿ ಆಯ್ಕೆ ಮಾಡಿದ್ದಾರೆ. ಕಳೆದ 30-40 ವರ್ಷದಿಂದ ಸಾರ್ವಜನಿಕ ಕೆಲಸ ಮಾಡಿದ ವ್ಯಕ್ತಿ ನಾನು. ಹೊಸಬರಿಗೆ ಅವಕಾಶ ಕೊಟ್ಟಾಗ ಹೊಸ ಉತ್ಸಾಹದಿಂದ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕೊಟ್ಟ ಸ್ಥಾನಕ್ಕೆ ನ್ಯಾಯ ಒದಗಿಸುತ್ತೇನೆ ಎಂದರು.
ಇಲ್ಲಿಗೆ ಬರಲು ಬಂಡವಾಳ ಹಾಕಿಲ್ಲ :ಬಂಡಾವಳ ಇರುವುದು ವ್ಯವಹಾರದಲ್ಲಿ. ಅದನ್ನು ನಾನು ಘೋಷಣೆ ಮಾಡಿದ್ದೇನೆ. ನನ್ನ ವ್ಯವಹಾರಕ್ಕಾಗಿ ಬಂಡವಾಳ ಹಾಕಿದ್ದೇನೆ. ಇಲ್ಲಿ ಬರಲು ಬಂಡವಾಳ ಹಾಕಿಲ್ಲ ಎಂದು ಜೆಡಿಎಸ್ ನೂತನ ಪರಿಷತ್ ಸದಸ್ಯ ಗೋವಿಂದ ರಾಜ್ ಹೇಳಿದರು. ಬಂಡವಾಳಶಾಹಿಗೆ ಟಿಕೇಟ್ ನೀಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇಲ್ಲಿಗೆ ಬಂದಿರೋದು ಸಮಾಜ ಸೇವೆಗಾಗಿ.
ಸಮಾಜಸೇವೆಗೆ ಬಂಡವಾಳ ಹಾಕಿ ಏನು ಸಂಪಾದನೆ ಮಾಡಬಹುದು ಎಂದು ಪ್ರಶ್ನಿಸಿದರು. ನಾನೊಬ್ಬ ಕಾರ್ಯಕರ್ತ. ಕಳೆದ ಬಾರಿ ಕೋಲಾರ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಾ ಬರುತ್ತಿದ್ದೇನೆ ಎಂದರು.