ಬೆಂಗಳೂರು: ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ನಿನ್ನೆಯಷ್ಟೆ ಮುಗಿದಿದೆ. ಈಗ ಮೂರು ಪಕ್ಷಗಳಲ್ಲಿ ಸೋಲು- ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.ಎರಡೂ ಕ್ಷೇತ್ರಗಳಲ್ಲೂ ನಡೆದಿರುವ ಶೇಕಡವಾರು ಮತದಾನದ ಆಧಾರದ ಮೇಲೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮತದಾನ ನಡೆದಿರುವ ಮತಗಟ್ಟೆ ಕೇಂದ್ರಗಳ ಪಟ್ಟಿಯನ್ನು ಹಿಡಿದುಕೊಂಡು ಲೆಕ್ಕ ಹಾಕುವಲ್ಲಿ ನಿರತರಾಗಿದ್ದಾರೆ. ಯಾವ ಬೂತ್‌ನಲ್ಲಿ ಯಾವ ಜಾತಿಯವರಿದ್ದಾರೆ? ಜಾತಿ ಬೆಂಬಲ ಯಾವ ಪಕ್ಷಕ್ಕಿದೆ? ಬೂತ್ ಮಟ್ಟದಲ್ಲಿ ಮತದಾರರ ಸಂಖ್ಯೆ ಎಷ್ಟಿದೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತಿದ್ದಾರೆ. ಪಕ್ಷದ ಮುಖಂಡರು ಮತದಾನ ನಡೆದಿರುವ ಪಟ್ಟಿಯನ್ನು ಮುಂದಿಟ್ಟುಕೊಂಡು ತಮ್ಮ ಪಕ್ಷದ ಅಭ್ಯರ್ಥಿಗೆ ಎಷ್ಟು ಮತಗಳು ಲಭಿಸಿರಬಹುದು ಎಂದು ಅಂದಾಜು ಮಾಡುತ್ತಿದ್ದಾರೆ.
ಮೂರು ಪಕ್ಷಗಳು ಸೇರಿದಂತೆ ಪಕ್ಷೇತರರಿಗೂ ಮತಗಳು ಹಂಚಿಕೆಯಾಗಿರುವ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದು, ಮತದಾರರನ್ನು ಸೆಳೆಯುವಲ್ಲಿ ಎಡೆವಿರುವ ಬಗ್ಗೆ ಕಾರ್ಯತಂತ್ರ ರೂಪಿಸಿರುವುದು ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಪಕ್ಷದ ಅಭ್ಯರ್ಥಿಗಳ ಚಿತ್ತ ಫಲಿತಾಂಶದತ್ತ ನೆಟ್ಟಿದ್ದು, ಗೆಲುವು-ಸೋಲಿನ ಆತಂಕ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿಗಳ ಪರ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್ .ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಇಡೀ ಸದಸ್ಯರು ಅಖಾಡಕ್ಕಿಳಿದು ಮತದಾರರನ್ನು ಓಲೈಸುವ ಪ್ರಯತ್ನ ನಡೆಸಿದ್ದರು. ಬಿಜೆಪಿ ಮುಖಂಡರು ಸಹ ತಮ್ಮದೇ ಕಾರ್ಯತಂತ್ರ ರೂಪಿಸಿದರೆ, ಕಾಂಗ್ರೆಸ್ ಮುಖಂಡರು ಬಿಜೆಪಿ, ಜೆಡಿಎಸ್‌ಗೆ ತಿರುಗೇಟು ನೀಡಲು ರಣತಂತ್ರ ರೂಪಿಸಿದ್ದರು. ಇದಕ್ಕೆಲ್ಲಾ ನ.10 ರಂದು ಉತ್ತರ ದೊರೆಯಲಿದೆ.
ಶಿರಾ ಮತ್ತು ಆರ್.ಆರ್.ನಗರದಲ್ಲಿ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಬೆಟ್ಟಿಂಗ್ ಪ್ರಾರಂಭಗೊಂಡಿದ್ದು, ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಅವರವರ ಮಿತಿಗನುಣವಾಗಿ ಬಾಜಿ ಕಟ್ಟಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಶೇ. 45.24 ರಷ್ಟು ಮತದಾನವಾಗಿದ್ದರೆ, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ನಡುವೆಯೂ ದಾಖಲೆಯೆಂಬಂತೆ ಶೇ. 84.54 ರಷ್ಟು ಮತದಾನವಾಗಿದೆ. ಶಿರಾದಲ್ಲಿ ಬಿಜೆಪಿಯ ಡಾ.ರಾಜೇಶ್‌ಗೌಡ, ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಹಾಗೂ ಜೆಡಿಎಸ್‌ನ ಅಮ್ಮಾಜಮ್ಮ ಸೇರಿದಂತೆ 15 ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರ ಮುದ್ರೆ ಒತ್ತಿದ್ದು, ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.