ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳುತ್ತಾ ಸಾಗಿರುವ ಸಂದರ್ಭದಲ್ಲಿ ಚುನಾವಣಾ ಆಯೋಗದ ಮೂಲಕ ರಾಜ್ಯ ಕಾಂಗ್ರೆಸ್ ಒಂದು ಹಂತದ ಮೇಲುಗೈ ಸಾಧಿಸಿದೆ.
ನವೆಂಬರ್ 3ರಂದು ಮತದಾನ ನಡೆಯಲಿರುವ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಗೆ ಅಕ್ಟೋಬರ್ 14 ರಂದು ಬಿಜೆಪಿಯ ಮುನಿರತ್ನ ನಾಯ್ಡು, ಕಾಂಗ್ರೆಸ್ನ ಕುಸುಮಾ ಹನುಮಂತರಾಯಪ್ಪ ಹಾಗೂ ಜೆಡಿಎಸ್ನ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಸರಿ ಸುಮಾರು ಒಂದು ಗಂಟೆ ಅವಧಿಯಲ್ಲಿ ಮೂವರು ಅಭ್ಯರ್ಥಿಗಳು ಆಗಮಿಸಿ ಒಂದೇ ದಿನ ನಾಮಪತ್ರ ಸಲ್ಲಿಕೆ ಮಾಡಿದ್ದು ವಿಶೇಷವಾಗಿತ್ತು.
ಮೊದಲಿಗೆ ಬಿಜೆಪಿಯಿಂದ ಮುನಿರತ್ನ ನಾಯ್ಡು ನಾಮಪತ್ರ ಸಲ್ಲಿಸಿದರು, ಎರಡನೆಯವರಾಗಿ ಕೃಷ್ಣಮೂರ್ತಿ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ಕೊನೆಯದಾಗಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಕುಸುಮಾ ಹನುಮಂತರಾಯಪ್ಪ ಉಳಿದ ಇಬ್ಬರು ಅಭ್ಯರ್ಥಿಗಳು ಆಗಮಿಸಿದ ಮಾರ್ಗದ ಬದಲು ಇನ್ನೊಂದು ಮಾರ್ಗದಿಂದ ಪ್ರವೇಶಿಸಿದರು. ಈ ಸಂದರ್ಭ ಆ ಭಾಗದಲ್ಲಿ ಹೆಚ್ಚಿನ ಪೊಲೀಸರು ನಿಯೋಜನೆಗೊಳ್ಳದ ಹಿನ್ನೆಲೆ ನಾಮಪತ್ರ ಸಲ್ಲಿಕೆ ಕೇಂದ್ರದ ಭಾಗದವರೆಗೂ ಅವರು ತಮ್ಮ ವಾಹನದಲ್ಲಿ ಆಗಮಿಸಿದ್ದರು. ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಅವರ ವಿರುದ್ಧ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಾವಲು ವಾಹನದ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ರಾಜರಾಜೇಶ್ವರಿ ನಗರ ಠಾಣೆ ಇನ್ಸ್ಪೆಕ್ಟರ್ ವಿ. ನವೀನ್ ಸುಪೇಕರ್ ಅವರ ಮುಂದಾಳತ್ವದಲ್ಲಿ ಠಾಣೆಯ ಎಎಸ್ಐ ದೂರನ್ನು ದಾಖಲಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ದೂರನ್ನ ಕುಸುಮಾ ಹನುಮಂತರಾಯ ವಿರುದ್ಧ ದಾಖಲಿಸಲಾಗಿತ್ತು. ಇದನ್ನು ತೀವ್ರವಾಗಿ ಖಂಡಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದರು.
ಠಾಣೆಯ ಇನ್ಸ್ಪೆಕ್ಟರ್ ವಿ. ನವೀನ್ ಸುಪೇಕರ್ ಬಿಜೆಪಿ ಅಭ್ಯರ್ಥಿಯ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಇವರನ್ನು ಹಾಗೂ ಇವರ ಮಾತನ್ನು ಕೇಳಿಕೊಂಡು ಎಫ್ಐಆರ್ ದಾಖಲಿಸಿದ ಅವರನ್ನು ಅಮಾನತು ಮಾಡಬೇಕು, ಇಲ್ಲವೇ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಇವರ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ ಎರಡು ದಿನ ಹಿಂದೆ ಎಎಸ್ಐ ಅವರನ್ನು ರಜೆ ಮೇಲೆ ಕಳಿಸಿದ್ದಾರೆ. ಇಂದು ನವೀನ್ ರನ್ನ ರಾಜ್ಯ ಗುಪ್ತದಳ ವಿಭಾಗಕ್ಕೆ ವರ್ಗಾಯಿಸಿದೆ. ಆರ್.ಪಿ. ಅನಿಲ್ ಅವರನ್ನು ರಾಜರಾಜೇಶ್ವರಿ ನಗರ ಠಾಣೆ ಇನ್ಸ್ಪೆಕ್ಟರ್ ಆಗಿ ವರ್ಗಾಯಿಸಲಾಗಿದೆ.
ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣಾ ಕದನ ಈ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷ ತಾವು ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಕ್ರಮ ನಡೆಸುತ್ತಿದೆ ಎಂದು ಆರೋಪಿಸಿ ನಡೆಸಿದ ಹೋರಾಟಕ್ಕೆ ಹಾಗೂ ಚುನಾವಣಾ ಆಯೋಗದ ಮೇಲೆ ತಂದ ಒತ್ತಡಕ್ಕೆ ಫಲ ಸಿಕ್ಕಿದೆ ಎಂದು ಹೇಳಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಿಸಿಕೊಳ್ಳುತ್ತಿರುವ ಕ್ಷೇತ್ರದಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು, ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮನೆಮನೆಗೆ ತೆರಳಿ ಮತ ಪ್ರಚಾರ ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಕೂಡ ಕ್ಷೇತ್ರಕ್ಕೆ ಒದಗಿಸಲಾಗಿದ್ದು, ಅರೆ ಸೇನಾ ಪಡೆಯನ್ನು ನಿಯೋಜಿಸಲಾಗಿದೆ.