ಬೆಂಗಳೂರು:ಸಾರ್ವಜನಿಕರ ಠೇವಣಿ ಹಣ ದುರ್ಬಳಕೆ ಮಾಡಿಕೊಂಡಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಲಿಮಿಟೆಡ್‌ಗೆ ನೂತನ ಆಡಳಿತಾಧಿಕಾರಿಯಾಗಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಆರ್. ಅಶೋಕನ್ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬ್ಯಾಂಕ್ನ ಹಗರಣದ ಕುರಿತು ಡಿಐಜಿ ಹಂತದ ಅಧಿಕಾರಿಯಿಂದ ತನಿಖೆ ನಡೆಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿ, ನ್ಯಾಯಾಲಯದ ಸೂಚನೆಯಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಆರ್. ಅಶೋಕನ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.